ಬೆಂಗಳೂರು, ನ 16 (DaijiworldNews/MS): ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್, ಪಕ್ಷದ ಚುನಾವಣೆ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು ಇದಕ್ಕೆ ಬಿಜೆಪಿ ವ್ಯಂಗ್ಯವಾಡಿದ್ದು ಕಾಂಗ್ರೆಸ್ ಟಿಕೆಟ್ ಬಿಸಿನೆಸ್ ಎಂದು ಕರೆದಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, " ಕಾಂಗ್ರೆಸ್ ಅಭ್ಯರ್ಥಿಯಾಗಲು ಅಧಿಕೃತ ಟಿಕೆಟ್ ಹರಾಜಿಗಿಟ್ಟಿರುವ ಕೆಪಿಸಿಸಿ ಅಧ್ಯಕ್ಷರು, ಟಿಕೆಟ್ ಗಾಗಿಯೇ ಲಕ್ಷಾಂತರ ಕಟ್ಟಿಸಿಕೊಳ್ಳುವ ಮೂಲಕ ಸ್ಥಿತಿವಂತರಿಗೆ ಮಾತ್ರ ಟಿಕೆಟ್ ಎನ್ನುವ ನಿಯಮ ಜಾರಿಗೆ ತಂದಂತಿದೆ. ಹಾಗಿದ್ದರೆ ಸಾಮಾನ್ಯ ಕಾರ್ಯಕರ್ತರ ಪಾಡೇನು? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದ ಟಿಕೆಟ್ಗೆ ಅರ್ಜಿ ಸಲ್ಲಿಸಲು ಲಕ್ಷಾಂತರ ಕಟ್ಟಬೇಕೆಂಬ ಕಟ್ಟಪ್ಪಣೆ ಮಾಡುವ ಮೂಲಕ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಇಲ್ಲ ಎನ್ನುವ ಸಂದೇಶ ಸಾರಿದೆ.ಸಾಮಾನ್ಯ ಕಾರ್ಯಕರ್ತರು ಪೋಸ್ಟರ್ ಅಂಟಿಸಲು ಮಾತ್ರವೇ? ಅರ್ಜಿ ಸಲ್ಲಿಸಲು ದಿನಾಂಕ ನಿಗದಿ ಪಡಿಸಿರುವ ಕೆಪಿಸಿಸಿ ಅಧ್ಯಕ್ಷರು ಅರ್ಜಿ ಸಲ್ಲಿಸದವರಿಗೆ ಟಿಕೆಟ್ ಇಲ್ಲ ಎಂದು ಈಗಲೇ ಘೋಷಣೆ ಮಾಡುವರೇ? ಅಥವಾ ಹೆಚ್ಚಿನ ದುಡ್ಡು ಕೊಡುವವರಿಗೆ ಬ್ಲಾಕ್ನಲ್ಲಿ ಮಾರಿಕೊಳ್ಳುವರೇ? ಎಂದು ಲೇವಡಿ ಮಾಡಿದೆ.