ತ್ರಿಶೂರ್, ನ 16 (DaijiworldNews/DB): ಶಾಲೆಯ ಸಹಪಾಠಿಗಳಿಬ್ಬರು ಮೂರೂವರೆ ದಶಕಗಳ ಬಳಿಕ ಸಪ್ತಪದಿ ತುಳಿದ ಅಪರೂಪದ ವಿದ್ಯಾಮಾನ ಕೇರಳದ ತ್ರಿಶೂರ್ನಲ್ಲಿ ನಡೆದಿದೆ. ಈ ಮದುವೆಗೆ ಸಹಪಾಠಿಗಳೇ ಸಾಕ್ಷಿಯಾಗಿದ್ದಾರೆ.
ಹರಿದಾಸನ್ ಮತ್ತು ಸುಮತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಹಪಾಠಿ ಜೋಡಿ. 1986 - 87ರಲ್ಲಿ ಪ್ರೌಢಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದಿದ್ದ ಹರಿದಾಸನ್ ಹಾಗೂ ಸುಮತಿ ಅಲ್ಲಿಂದಲೇ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇಬ್ಬರೂ ಅವಿವಾಹಿತರಾಗಿದ್ದರು.
ಇನ್ನು ಹೈಸ್ಕೂಲ್ನಲ್ಲಿ ಸಹಪಾಠಿಗಳಾಗಿದ್ದವರೆಲ್ಲ ವಾಟ್ಸಾಪ್ ಗ್ರೂಪ್ ರಚಿಸಿಕೊಂಡಿದ್ದರು. ಮೂರು ವರ್ಷದ ಹಿಂದೆ ಎಲ್ಲರೂ ಶಾಲೆಯಲ್ಲಿ ಪುನರ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹರಿದಾಸನ್ ಮತ್ತು ಸುಮತಿ ಅವರು ವಿವಾಹವೇ ಆಗದಿರುವ ವಿಷಯ ಇತರ ಸಹಪಾಠಿಗಳಿಗೆ ಗೊತ್ತಾಗಿದೆ. ಇಬ್ಬರನ್ನೂ ಒಂದುಗೂಡಿಸುವ ತೀರ್ಮಾನಕ್ಕೆ ಬಂದ ಇತರ ಸಹಪಾಠಿಗಳು ಇಬ್ಬರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಸ್ನೇಹಿತರ ಪ್ರಯತ್ನಕ್ಕೆ ಇಬ್ಬರೂ ಒಪ್ಪಿದ್ದು, ನವೆಂಬರ್ 14ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.