ಭುವನೇಶ್ವರ್, ನ 10 (DaijiworldNews/DB): ಆನೆಗಳ ಹಿಂಡೊಂದು ಮದ್ಯ ಬೆರೆತ ನೀರು ಸೇವಿಸಿ ಗಂಟೆಗಟ್ಟಲೆ ಅರಣ್ಯದೊಳಗೆ ನಿದ್ರಿಸಿದ ಘಟನೆ ಒಡಿಶಾದ ಹಳ್ಳಿಯೊಂದರಲ್ಲಿ ನಡೆದಿದೆ. ಆನೆಗಳ ಹಿಂಡು ಮಲಗಿರುವುದನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಕಾಡಿನಲ್ಲಿ ಗ್ರಾಮಸ್ಥರು ಮದ್ಯ ತಯಾರಿಸಲೆಂದು ಅಮಲಿರುವ ಮಹುವಾ ಹೂವುಗಳನ್ನು ನೀರಿನಲ್ಲಿ ಹಾಕಿ ಕುಂಡಗಳಲ್ಲಿ ಸಂಗ್ರಹಿಸಿಟ್ಟಿದ್ದರು. ಅದನ್ನು 24 ಆನೆಗಳು ಕುಡಿದಿವೆ. ಮದ್ಯದ ಅಮಲಿನಿಂದಾಗಿ ಮದ್ಯ ತಯಾರಿಕೆಗೆಂದು ನೀರಿನಲ್ಲಿಟ್ಟ ಮಹುವಾ ಹೂಗಳ ಕುಂಡಗಳ ಬಳಿ ಗಾಢ ನಿದ್ರೆಗೆ ಶರಣಾಗಿವೆ. ಇದೇ ವೇಳೆ ಕಾಡಿನ ಬಳಿಯ ನಿವಾಸಿಗಳು ಮಹುವಾ ಎಂಬ ಮದ್ಯ ತಯಾರಿಸಲು ಕಾಡೊಳಗೆ ಹೋಗಿದ್ದು, ಆನೆಗಳ ಹಿಂಡು ನೋಡಿ ಬೆಚ್ಚಿ ಬಿದ್ದಿದ್ದಾರೆ. ಆನೆಗಳ ಪೈಕಿ ಒಂಬತ್ತು ಗಂಡಾನೆಗಳು, ಆರು ಹೆಣ್ಣು ಮತ್ತು ಒಂಬತ್ತು ಕರುಗಳಿದ್ದವು ಎಂದು ಗ್ರಾಮಸ್ಥರು ವಿವರಿಸಿದ್ದಾರೆ.
ಬೆಳಗ್ಗೆ ಆರು ಗಂಟೆಗೆ ಕಾಡಿನೊಳಗೆ ಹೋದಾಗ ಮಡಕೆಗಳೆಲ್ಲ ಮುರಿದು ಅದರಲ್ಲಿದ್ದ ನೀರೂ ಚೆಲ್ಲಿ ಹೋಗಿತ್ತು. ಅಲ್ಲೇ ಆನೆಗಳು ಮಲಗಿದ್ದನ್ನು ಕಂಡು ಭಯಗೊಂಡೆವು. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆವು ಎಂದು ಗ್ರಾಮಸ್ಥ ನಾರಿಯಾ ಸೇಥಿ ಹೇಳಿದ್ದಾರೆ.
ಅರಣ್ಯ ಸಿಬಂದಿ ಬಂದು ಡ್ರಮ್ ಬಾರಿಸಿ ಆನೆಗಳನ್ನು ಎಬ್ಬಿಸಿದರು. ಬಳಿಕ ಆನೆಗಳು ಕಾಡಿನೊಳಗೆ ಹೋದವು. ಆದರೆ ಮಹುವಾ ನೀರನ್ನು ಆನೆಗಳು ಕುಡಿದಿವೆಯೇ ಎಂಬುದು ಖಚಿತವಾಗಿಲ್ಲ ಎಂದು ಅರಣ್ಯ ಸಂರಕ್ಷಣಾಧಿಕಾರಿ ಘಾಸಿರಾಮ್ ಪಾತ್ರ ತಿಳಿಸಿರುವುದಾಗಿ ವರದಿಯಾಗಿದೆ.