ಕೊರ್ಬಾ(ಛತ್ತೀಸ್ಗಢ), ನ 10 (DaijiworldNews/DB): ಮದ್ಯದ ಅಮಲಿನಲ್ಲಿ ವೈದ್ಯರೊಬ್ಬರು ಮಹಿಳಾ ರೋಗಿಗೆ ಥಳಿಸಿದ ಘಟನೆ ಛತ್ತೀಸ್ಗಢದ ಕೊರ್ಬಾ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.
ಗೆರ್ವಾನಿ ಗ್ರಾಮದ ಸುಕ್ಮತಿ ಎಂಬ ಮಹಿಳೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಪುತ್ರ ಶ್ಯಾಮ್ ಕುಮಾರ್ ಅವರು 108 ಮತ್ತು 112ಗೆ ಕರೆ ಮಾಡಿದ್ದು, ಬರುವುದು ತಡವಾಗಿದೆ ಎಂದು ಆ ಕಡೆಯಿಂದ ಹೇಳಲಾಗಿದೆ. ಆದರೆ ಸುಕ್ಮತಿ ಅವರ ಆರೋಗ್ಯ ಬಹಳ ಹದಗೆಟ್ಟ ಹಿನ್ನೆಲೆಯಲ್ಲಿ ಕೂಡಲೇ ಆಟೋ ರಿಕ್ಷಾದ ಮೂಲಕ ಅವರನ್ನು ಪುತ್ರ ಶ್ಯಾಮ್ಕುಮಾರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಿದ ವೈದ್ಯ ಆಕೆಗೆ ಥಳಿಸಿದ್ದಾನೆ. ಇದರಿಂದ ಸಿಟ್ಟುಗೊಂಡ ಪುತ್ರ ಶ್ಯಾಮ್ಕುಮಾರ್ ಥಳಿಸಿರುವುದನ್ನು ಪ್ರಶ್ನಿಸಿದಾಗ ಸುಮ್ಮನಿರುವಂತೆ ವೈದ್ಯ ಬೆದರಿಕೆ ಹಾಕಿದ್ದಾನೆ ಎಂದು ಶ್ಯಾಮ್ಕುಮಾರ್ ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಇನ್ನು ಘಟನೆಯು ಆಸ್ಪತ್ರೆಯ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ವೈದ್ಯರ ವಿರುದ್ದ ಶೋಕಾಸ್ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ಅವಿನಾಶ್ ಮೆಶ್ರಮ್ ತಿಳಿಸಿದ್ದಾರೆ.