ಬೆಂಗಳೂರು, ನ 04 (DaijiworldNews/MS): ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಅವರ ಪೋಟೋ ಸೇರಿಸಿ ಕರೆನ್ಸಿ ನೋಟು ಸಿದ್ದಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ , ಅಪರೇಷನ್ ಕಮಲ ಕುರಿತು ಟಾಂಗ್ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ , ಕೆ.ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಶಾಸಕರಿಗೆ 500 ಕೋಟಿ ಆಮಿಷ ಒಡ್ಡಿದ್ದೆ ಎಂದು ಹೇಳಿರುವುದರಲ್ಲಿ ಯಾವ ಆಶ್ಚರ್ಯ, ಅನುಮಾನಗಳೂ ಇಲ್ಲ. ತೆಲಂಗಾಣದಲ್ಲಿ 150 ಕೋಟಿಯ ಡೀಲ್ನಲ್ಲೂ ನಿಮ್ಮದೇ ನೋಟ್ ಎಣಿಸುವ ಮಿಷನ್ ಕೆಲಸ ಮಾಡಿತ್ತೆ ಈಶ್ವರಪ್ಪನವರೇ? 40% ಕಮಿಷನ್ ಲೂಟಿಯನ್ನು ಕರ್ನಾಟಕದ ನಂತರ ತೆಲಂಗಾಣದಲ್ಲಿ ಇನ್ವೆಸ್ಟ್ ಮಾಡ್ತಿದೀರಾ ಎಂದು ಲೇವಡಿ ಮಾಡಿದೆ.
ಕಾಂಗ್ರೆಸ್ ಶಾಸಕ ಸಂಗಮೇಶ್ ಅವರನ್ನು ಬಿಜೆಪಿಗೆ ಕರೆತರಲು ಈಶ್ವರಪ್ಪನವರು 50 ಕೋಟಿ ನೀಡುವ ಆಮಿಷ ಇಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದರು. ಅದಕ್ಕೆ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿ, "ಡಿ.ಕೆ ಶಿವಕುಮಾರ್ ಅವರಿಗೆ ತಮ್ಮ ಪಕ್ಷದ ಶಾಸಕರ ಬೆಲೆ ಗೊತ್ತಿಲ್ಲ. ನಾನು 500 ಕೋಟಿ ಎಂದು ಹೇಳಿದ್ದೆ. ಆದರೆ ಇವರು ಯಾಕೆ ಸಂಗಮೇಶ್ ಅವರು ಇಷ್ಟು ಕೆಳಮಟ್ಟಕ್ಕಿಳಿಸುತ್ತಾರೆ " ಎಂದು ತಿರುಗೇಟು ನೀಡಿದ್ದರು.
ಇದಕ್ಕೆ ಕಾಂಗ್ರೆಸ್, "ಈಶ್ವರಪ್ಪನವರು ಗಂಭೀರ ಆರೋಪವನ್ನು ನಿರಾಕರಿಸದೆ ಶಾಸಕ ಸಂಗಮೇಶ್ ಅವರಿಗೆ 500 ಕೋಟಿ ಆಮಿಷ ಒಡ್ಡಿದ್ದೆ ಎಂದು ಒಪ್ಪಿದ್ದಾರೆ. ನೋಟ್ ಎಣಿಸುವ ಮೆಷಿನ್ ಇಟ್ಟಿರುವ ಅವರು 40% ಕಮಿಷನ್ ಹಣದಲ್ಲಿ 500 ಕೋಟಿ ನೀಡಲು ಮುಂದಾಗಿದ್ರಾ? ಆಪರೇಷನ್ ಕಮಲ ಮಾಡಿಯಾದ್ರೂ ಸಿಎಂ ಆಗೋಣ ಎಂಬ ಕನಸು ಕಂಡಿದ್ರಾ? ಹೀಗಾಗಿಯೇ ರಾಜೀನಾಮೆ ನೀಡುವಂತಾಯಿತೇ" ಎಂದು ವ್ಯಂಗ್ಯವಾಗಿ ಪ್ರಶ್ನಿಸಿತ್ತು.