ಬಿಹಾರ, ನ 04 (DaijiworldNews/DB): ಬಿಹಾರದ ನ್ಯಾಯಾಲಯವೊಂದಕ್ಕೆ ನ್ಯಾಯವಾದಿಯೊಬ್ಬರು ಗನ್ ಕೊಂಡೊಯ್ದ ಘಟನೆ ನಡೆದಿದ್ದು, ನ್ಯಾಯವಾದಿಯನ್ನು ನ್ಯಾಯಾಧೀಶರೇ ಬಂಧನಕ್ಕೆ ತಾಕೀತು ಮಾಡಿದ್ದಾರೆ.
ಸಾಮಾನ್ಯವಾಗಿ ನ್ಯಾಯಾಲಯದೊಳಗೆ ಪೊಲೀಸರು ಹೊರತುಪಡಿಸಿ ಇತರ ಯಾರಿಗೂ ಗನ್ ಕೊಂಡೊಯ್ಯಲು ಅವಕಾಶವಿಲ್ಲ. ಆದರೆ ಬಿಹಾರದ ನ್ಯಾಯವಾದಿ ಪಂಕಜ್ಕುಮಾರ್ ದಾಸ್ ಅವರು ನ್ಯಾಯಾಲಯಕ್ಕೆ ಗನ್ ಕೊಂಡೊಯ್ದಿದ್ದಾರೆ. ಈ ವಿಚಾರ ನ್ಯಾಯಾಧೀಶ ಡಿ.ಕೆ. ಪ್ರಧಾನ್ ಅವರ ಗಮನಕ್ಕೆ ಬಂದಿದ್ದು, ಪಂಕಜ್ ಕುಮಾರ್ ದಾಸ್ ಅವರನ್ನು ಬಂಧಿಸುವಂತೆ ಭದ್ರತಾ ಸಿಬಂದಿಗಳಿಗೆ ಹೇಳಿದ್ದಾರೆ. ಕೂಡಲೇ ನ್ಯಾಯವಾದಿ ಕೈಯಲ್ಲಿದ್ದ ಗನ್ನ್ನು ವಶಪಡಿಸಿಕೊಂಡ ಭದ್ರತಾ ಸಿಬಂದಿ ಅವರನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದರು.
ಶಸ್ತ್ರಾಸ್ತ್ರ ಕಾಯಿದೆಯ ಸಂಬಂಧಿತ ಸೆಕ್ಷನ್ ಹಾಗೂ ಐಪಿಸಿಯ ಸೆಕ್ಷನ್ 186 ಅಡಿಯಲ್ಲಿ ಪಂಕಜ್ಕುಮಾರ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ರಾಮ್ ಸಿಂಗ್ ತಿಳಿಸಿದ್ದಾರೆ. ಬಳಿಕ ಅವರನ್ನು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.
ಈ ನಡುವೆ ದಾಸ್ ಅವರಿಗೆ ಕ್ಷಮಾಪಣೆ ನೀಡುವಂತೆ ಇತರ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದು, ನ್ಯಾಯಾಧೀಶರು ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ತಿಳಿದು ಬಂದಿದೆ.