ಕಲಬುರ್ಗಿ,ಫೆ 20(MSP): ಇಲ್ಲಿನ ತಾವರಗೇರಾ ಸೀಮಾಂತರದಲ್ಲಿ ಬರುವ ಕೇರೂರ ರಸ್ತೆಯ ದರ್ಗಾ ಸಮೀಪದಲ್ಲಿ ಫೆ.16 ರಂದು ನಡೆದ ಧಾರ್ಮಿಕ ಪ್ರಚಾರಕ ಉತ್ತರ ಪ್ರದೇಶ ಮೂಲದ ಗಾಜಿಯಾಬಾದನ ಮಹ್ಮದ್ ಜಲಾಲ್ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದೆ.
ಕೊಲೆಯಾದ ವ್ಯಕ್ತಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಮತ್ತು ಕುರಾನ್ ಗ್ರಂಥ ಕುರಿತು ಅವಹೇಳನಕಾರಿ ಪ್ರಚಾರ ಮಾಡುತ್ತಿದ್ದ ಎಂದು ಕತ್ತು ಸೀಳಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ನ 30 ವರ್ಷದ ಜಲಾಲ್ ಕೊಲೆಯಾದ ಧರ್ಮ ಪ್ರಚಾರಕ. ಇವನು ಕಲಬುರ್ಗಿಯಲ್ಲಿ ಸುಮಾರು ೫-೬ ತಿಂಗಳಿನಿಂದ ಪಾಕ್ ಮೂಲದ ಧರ್ಮವನ್ನು ಪ್ರಚಾರ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ತಾನೇ ಕೊನೆಯ ನಬಿ (ಅಲ್ಲಾಹನ ದೂತ ಮತ್ತು ಕೊನೆಯ ಪ್ರವಾದಿ) ಎಂದು ಪಾಕಿಸ್ತಾನದಲ್ಲಿ ಹೇಳಿಕೊಂಡು ತಿರುಗುತ್ತಿರುವ ವ್ಯಕ್ತಿಯೋರ್ವನ ಅಂದರೆ ’ಅಹ್ಮದ್ ಇಸಾ’ ಪಂಥದ ಧರ್ಮ ಪ್ರಚಾರಕನಾಗಿ ಈತ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇಸ್ಲಾಂ ಧರ್ಮದ ಬಗ್ಗೆ ಅಪ ಪ್ರಚಾರ ಮಾಡದಿರುವಂತೆ ಬುದ್ಧಿವಾದ ಹೇಳಿದರೂ ಕೇಳದ ಹಿನ್ನೆಲೆ ಆಕ್ರೋಶಗೊಂಡ 20ಕ್ಕೂ ಹೆಚ್ಚು ಯುವಕರ ತಂಡ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಪ್ರಚಾರಕ ಜಲಾಲ್ ನನ್ನು ಮೊದಲು ತಾಜಸುಲ್ತಾನಪುರ ಬಳಿ ಕರೆದೊಯ್ದು ನಂತರ ತಾವರಗೇರಾ ಕ್ರಾಸ್ ಬಳಿ ಕುತ್ತಿಗೆ, ಹೊಟ್ಟೆಗೆ ಇರಿದು ಬರ್ಬರವಾಗಿ ಹತ್ಯೆ ಮಾದಿದ್ದಾರೆ. ಕೊಲೆ ಮಾಡಿದ ಯುವಕರೆಲ್ಲರೂ ಸುನ್ನಿ ಮತ್ತು ಶಿಯಾ ಪಂಗಡಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಪೊಲೀಸರು 14 ಜನರನ್ನು ಬಂಧಿಸಿದ್ದಾರೆ.ಬಂಧಿತರನ್ನು ತಬರೇಜ್, ಉಮರ್, ಅಮಜದ್, ಅಜರ್, ರಹೀಮ್, ಇಸ್ಮಾಯಿಲ್, ಹುಸೇನ್, ಮಹ್ಮದ್ ಉಮರ್, ಗೌಸ್, ಮುಕ್ರಂ, ಅಬ್ದುಲ್, ಚಾಂದ್ ಪಾಷಾ, ರಹೀಮ್ ಮತ್ತು ಮುದ್ದೆಪೀರ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ವ್ಯಕ್ತಿಗಳು ಶಾಮೀಲಾಗಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ.