ಹಾವೇರಿ, ನ 03 (DaijiworldNews/MS): ಕಳೆದ ಮೂರು ದಿನಗಳಿಂದ ಹಾವೇರಿ ತಹಶೀಲ್ದಾರ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಹಲವು ಊಹಾಪೋಹಾಕ್ಕೆ ಕಾರಣವಾಗಿದೆ.
ಅ.31ರಂದು ರಾತ್ರಿ 9.30ಕ್ಕೆ ತಹಶೀಲ್ದಾರ್ ಗಿರೀಶ್ ಸ್ವಾದಿ ಅವರು, ತಮಗೆ ಪರಿಚಿತರಿರುವ ಬೆಳಗಾವಿಯ ಆಜಾಮ್ ನಗರದ ಜಹೂರ ಅಂಗಡಿ ಅವರ ಮೊಬೈಲ್ನಿಂದ ಪತ್ನಿಗೆ ಕಡೆಯ ಬಾರಿ ಕರೆ ಮಾಡಿದ್ದರು. ನಾಳೆ ರಾಜ್ಯೋತ್ಸವ ಇರುವ ಹಿನ್ನಲೆಯಲ್ಲಿ ಹಾವೇರಿಯ ಪ್ರವಾಸಿ ಮಂದಿರದಲ್ಲಿ ಇಲ್ಲವೇ ಹಾನಗಲ್ ರಸ್ತೆಯಲ್ಲಿರುವ ಶಿವಾ ರೆಸಿಡೆನ್ಸಿಯಲ್ಲಿ ಉಳಿದುಕೊಳ್ಳುತ್ತೇನೆ’ ಎಂದು ಹೇಳಿದ್ದರು
ಆದರೆ ಮರುದಿನ ಬೆಳಿಗ್ಗೆ 6 ಗಂಟೆಗೆ ಕಚೇರಿಯ ವಾಹನ ಚಾಲಕ ಹಾವೇರಿಯ ಸಿದ್ಧೇಶ್ವರ ನಗರದ ತಹಶೀಲ್ದಾರ್ ಅವರ ಮನೆಗೆ ಬಂದು ವಿಚಾರಿಸಿದಾಗ, ತಹಶೀಲ್ದಾರ್ ಅವರು ರಾತ್ರಿ ಮನೆಗೆ ಬಾರದಿರುವುದು ಹಾಗೂ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ, ತಹಶೀಲ್ದಾರ್ ಸಂಪರ್ಕದಲ್ಲಿದ್ದಾರೆ, ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.