ರಾಂಚಿ, ನ 03 (DaijiworldNews/DB): ವೈದ್ಯಕೀಯ ಲೋಕಕ್ಕೇ ಸವಾಲೆಸೆಯುವ ವಿಶೇಷ ಪ್ರಕರಣವೊಂದು ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ಘಟಿಸಿದೆ. ಕೇವಲ 21 ದಿನದ ನವಜಾತ ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಬೆಳವಣಿಗೆಯಾಗದ ಎಂಟು ಭ್ರೂಣಗಳಿರುವುದು ಪತ್ತೆಯಾಗಿದ್ದು, ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣಗಳನ್ನು ಹೊರ ತೆಗೆದಿದ್ದಾರೆ.
ಕಳೆದ ಅಕ್ಟೋಬರ್ 10ರಂದು ರಾಮಘಡದಲ್ಲಿ ಜನಿಸಿದ್ದ ಹೆಣ್ಣು ಮಗುವಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಟಿ ಸ್ಕ್ಯಾನ್ ಮಾಡಲಾಯಿತು. ಈ ವೇಳೆ ಶಿಶುವಿನ ಹೊಟ್ಟೆಯಲ್ಲಿ ಗಡ್ಡೆ ಇರುವುದನ್ನು ವೈದ್ಯರು ಪತ್ತೆ ಹಚ್ಚಿದ್ದರು. ಬಳಿಕ ರಾಂಚಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಇಲ್ಲಿ ನವೆಂಬರ್ 1 ರಂದು ಮಗುವನ್ನು ಶಸ್ತ್ರಚಿಕಿತ್ಸೆಗೊಳಪಡಿಸಲಾಯಿತು. ಶಸ್ತ್ರಚಿಕಿತ್ಸೆ ನಡೆಸಿ ಎಂಟು ಭ್ರೂಣಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾದರು.
ಇನ್ನು ಈ ವಿಶೇಷ ಪ್ರಕರಣದ ಕುರಿತು ಮಕ್ಕಳ ತಜ್ಞ ಡಾ.ರಾಜೇಶ್ ಕುಮಾರ್ ಮಾತನಾಡಿ, ಸಿಟಿ ಸ್ಕ್ಯಾನ್ ಸಂದರ್ಭದಲ್ಲಿ ಶಿಶುವಿನ ಹೊಟ್ಟೆಯಲ್ಲಿ ಗಡ್ಡೆ ಇರುವುದು ಗೊತ್ತಾಗಿತ್ತು. ಆದರೆ ಆಪರೇಷನ್ ವೇಳೆ ವೈದ್ಯರಿಗೇ ಅಚ್ಚರಿ ಕಾದಿತ್ತು. 21 ದಿನದ ನವಜಾತ ಶಿಶುವಿನ ಹೊಟ್ಟೆಯೊಳಗೆ ಎಂಟು ಭ್ರೂಣ ಪತ್ತೆಯಾಗಿರುವುದನ್ನು ಒಂದೇ ಸಲಕ್ಕೆ ತೆಗೆದು ಹಾಕಿರುವುದಯ ಬಹುಶಃ ವಿಶ್ವದಲ್ಲೇ ಮೊದಲ ಪ್ರಕರಣವಾಗಲಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.