ನವದೆಹಲಿ, ಅ 30 (DaijiworldNews/DB): ಸೂರ್ಯ ದೇವ ನಮಗೆ ನೀಡಿರುವ ವರವೇ ಸೌರಶಕ್ತಿ. ಸೌರಶಕ್ತಿ ಬಳಕೆ ಮಾಡುವ ವಿಶ್ವದ ಪ್ರಮುಖ ರಾಷ್ಟ್ರಗಳ ಪೈಕಿ ಭಾರತವೂ ಒಂದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮನ್ ಕಿ ಬಾತ್ನ 94ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಭಾನುವಾರ ಮಾತನಾಡಿದ ಅವರು, ದೇಶಾದ್ಯಂತ ಇಂದು ಛತ್ ಪೂಜೆ ಆಚರಿಸಲಾಗುತ್ತಿದ್ದು, ಇದು ಸೂರ್ಯಾರಾಧನೆಯ ಪೂಜೆಯಾಗಿದೆ. ಆ ಮೂಲಕ ಪ್ರಕೃತಿಯೊಂದಿಗೆ ನಮ್ಮ ಸಂಸ್ಕೃತಿಯ ಆಳವಾದ ಸಂಪರ್ಕ ಎಂತಹುದು ಎಂಬುದನ್ನು ಈ ಪೂಜೆಯು ತಿಳಿಸುತ್ತದೆ ಎಂದರು.
ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಬಡ ಮತ್ತು ಮಧ್ಯಮ ವರ್ಗದ ಜನರ ಜೀವನವನ್ನು ಪರಿವರ್ತಿಸುವಲ್ಲಿ ಇದು ಉತ್ತಮ ಶಕ್ತಿಯಾಗಿದೆ. ಸೂರ್ಯ ದೇವ ನೀಡಿದ ವರ ಸೌರಶಕ್ತಿ ಎಂದವರು ತಿಳಿಸಿದರು.
ದೇಶದ ವಿವಿಧೆಡೆ ಆಚರಿಸುವ ಛತ್ ಪೂಜೆ ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಯ ಪ್ರತೀಕವಾಗಿ ಗಮನ ಸೆಳೆಯುತ್ತದೆ. ವಿದೇಶೀಯರೂ ಈ ಪೂಜೆಯನ್ನು ಆಚರಿಸುತ್ತಾರೆ. ಅದರರ್ಥ ನಮ್ಮ ಸಂಸ್ಕೃತಿ ಪ್ರಪಂಚದ ಮೂಲೆ ಮೂಲೆಗೂ ಪಸರಿಸಿದೆ ಎಂಬುದಾಗಿದೆ ಎಂದು ಮೋದಿ ಶ್ಲಾಘಿಸಿದರು.
ಗುಜರಾತ್ನಲ್ಲಿ ಹಿಂದೆ ಆಚರಣೆಯಲ್ಲಿಲ್ಲದ ಛತ್ ಪೂಜೆ ಈಗ ದೊಡ್ಡ ಮಟ್ಟದಲ್ಲಿ ಆಚರಿಸಲ್ಪಡುತ್ತಿರುವುದು ಹೆಮ್ಮೆಯ ಸಂಕೇತ. ಈ ಪವಿತ್ರ ಹಬ್ಬದಂದು ದೇಶವಾಸಿಗಳಿಗೆ ಹಬ್ಬದ ಶುಭಾಶಯ ಕೋರುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.