ನವದೆಹಲಿ, ಅ 29 (DaijiworldNews/DB): ಮಕ್ಕಳ ತುಂಟಾಟಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅಂತೆಯೇ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಬಾಲಕನೊಬ್ಬ ಬರೆದ ಚಿಕ್ಕ ಪದ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ಬಾಲಕನ ಮುಗ್ದತೆಗೆ ಮನಸೋತಿದ್ದಾರೆ.
ನನಗೆ ಕವಿತೆಯ ಕಲ್ಪನೆ ಇತ್ತು ಎಂಬುದು ನನ್ನ ಭಾವನೆ. ಆದರೆ ಈಗದು ಮನಸ್ಸಿನಾಳದಿಂದ ಹೊರ ಬರುತ್ತಿಲ್ಲ. ನಮ್ಮ ಮನೆಯ ಸುತ್ತಮುತ್ತಲೇ ಅದು ಅಲೆದಾಡುತ್ತಿದೆ ಎಂದು ಬಾಲಕ ಮುಗ್ದತೆಯ ಕವನ ಬರೆದಿದ್ದಾನೆ. ಇನ್ನೊಂದು ಕವನವನ್ನು ಆತ ತನ್ನ ತನ್ನ ತಾಯಿಗೆ ಅರ್ಪಿಸಿದ್ದು, ಅದರಲ್ಲಿ ಮುಳ್ಳುಗಳಿರುವ ಕಾಂಡದ ಮೇಲೆ ನೀವು ಗುಲಾಬಿಯಂತೆ ಸೌಂದರ್ಯವತಿಯಾಗಿದ್ದೀರಿ. ಒಮ್ಮೊಮ್ಮೆ ನೀವು ಕೋಪಗೊಳ್ಳುತ್ತೀರಿ ಎಂದು ಬರೆದಿದ್ದಾನೆ.
ಬಾಲಕ ಈ ಎರಡು ಸಾಲುಗಳ ಪದ್ಯಗಳನ್ನು ಕೊರೊನಾ ಸಮಯದಲ್ಲಿ ಬರೆದಿದ್ದು, ಅದನ್ನು ಆತನ ತಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಎರಡು ವರ್ಷಗಳ ನಂತರ ಈ ಪದ್ಯಗಳು ವೈರಲ್ ಆಗಿವೆ. ಹಲವರು ಶೇರ್ ಮಾಡಿ ಬಾಲಕನ ಮುಗ್ದ ಬರವಣಿಗೆಯನ್ನು ಶ್ಲಾಘಿಸಿದ್ದಾರೆ.