ಬೆಳಗಾವಿ, ಅ 27 (DaijiworldNews/MS): : ದೀಪಾವಳಿ ಹಬ್ಬದ ಸಂಭ್ರಮದಲ್ಲಿರಬೇಕಾದ ರಾಮದುರ್ಗದ ಮುದೇನೂರು ಗ್ರಾಮದಲ್ಲಿ ಜನ ಆಸ್ಪತ್ರೆ ದಾಖಲಾಗುವಂತೆ ಆಗಿದ್ದಾರೆ.
ಗ್ರಾಮದಲ್ಲಿ ಕುಡಿಯುವ ನೀರು ಕಲುಷಿತವಾಗಿ ಸರಬರಾಜಾಗಿದ್ದು, ಇದನ್ನು ಸೇವಿಸಿ 4 ದಿನಗಳ ಅಂತರದಲ್ಲಿ 90 ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಮುದೇನೂರು ಗ್ರಾಮದಲ್ಲಿ ನಡೆದಿದೆ.
ಕಳೆದ 4 ದಿನಗಳಲ್ಲಿ ಗ್ರಾಮದ 90 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.ಅಸ್ವಸ್ಥಗೊಂಡ 90ಕ್ಕೂ ಹೆಚ್ಚು ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 5 ಮಂದಿಯ ಸ್ಥಿತಿ ಗಂಭೀರವಿದ್ದು, ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಚರಂಡಿ ನೀರು ಮಿಶ್ರಣವಾಗಿತ್ತು. ಇದನ್ನು ತಿಳಿದರೂ ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ್ಯವಹಿಸಿದಕ್ಕೆ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. 44 ಪುರುಷರು, 34 ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದ್ದು, ಇದರಲ್ಲಿ 12 ಬಾಲಕರು , 8 ಮಂದಿ ಬಾಲಕಿಯರು ಅಸ್ವಸ್ಥಗೊಂಡಿದ್ದಾರೆ.
ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಗ್ರಾಮದ ಶಿವಪ್ಪ (70) ಹಾಗೂ ಮತ್ತೋರ್ವರು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.