ನವದೆಹಲಿ, ಅ 26 (DaijiworldNews/MS): ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ರಾಷ್ಟ್ರ ರಾಜಧಾನಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಉನ್ನತ ಹುದ್ದೆಗೆ ಆಯ್ಕೆಯಾದ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
"ಇತರ ಪಕ್ಷಗಳು ಕಾಂಗ್ರೆಸ್ನಿಂದ ಪಾಠವನ್ನು ಕಲಿತು ರಹಸ್ಯ ಮತದಾನದ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುತ್ತವೆ ಎಂದು ನಾನು ಭಾವಿಸುತ್ತೇನೆ" ಎಂದು ಮಿಸ್ತ್ರಿ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಿರಿಯ ನಾಯಕರು ಮತ್ತು ಸಂಸದರು ಉಪಸ್ಥಿತರಿದ್ದರು.
ಇನ್ನು ಖರ್ಗೆ ಪದಗ್ರಹಣಕ್ಕೂ ಮುನ್ನ ರಾಜ್ ಘಾಟ್ ಗೆ ತೆರಳಿ ರಾಷ್ಟ್ರಪಿತನಿಗೆ ಖರ್ಗೆ ನಮನ ಸಲ್ಲಿಸಿದರು. ಬಳಿಕ ನೆಹರು, ಇಂದಿರಾಗಾಂಧಿ ಹಾಗು ರಾಜೀವ್ ಗಾಂಧಿ ಘಾಟ್ ಗಳಿಗೆ ತೆರಳಿ ನಮನ ಸಲ್ಲಿಸಿದ್ದಾರೆ.