ಶ್ರೀನಗರ, ಫೆ 18 (MSP): ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಸ್ಫೋಟ ನಡೆಸಿ 44 ಯೋಧರ ಸಾವಿಗೆ ಕಾರಣವಾದ ಉಗ್ರನ ಆತ್ಮಾಹುತಿ ದಾಳಿಯ ಮಾಸ್ಟರ್ಮೈಂಡ್ ಎಂದೇ ಬಿಂಬಿಸಲ್ಪಟ್ಟ ಜೈಶ್ ಉಗ್ರ ಸಂಘಟನೆಗೆ ಸೇರಿದ ಅಬ್ದುಲ್ ರಶೀದ್ ಗಾಝಿಯನ್ನು ಭಾರತೀಯ ಸೇನೆ ಪಡೆ ಸೋಮವಾರ ಮುಂಜಾನೆ ನಡೆಸಿದ ದೀರ್ಘ ಕಾಲದ ಕಾರ್ಯಾಚರಣೆಯಲ್ಲಿ ಹತ್ಯೆಗೈದಿದ್ದಾರೆ.
ರಜೆ ಮುಗಿಸಿ ಬಸ್ ಮೂಲಕ ಕರ್ತವ್ಯಕ್ಕೆ ತೆರಳುತ್ತಿದ್ದ ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಸಿ ಕಳೆದ ಗುರುವಾರ ಪುಲ್ವಾಮದಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದರು. ಈ ಆತ್ಮಾಹುತಿ ದಾಳಿಯ ಮಾಸ್ಟರ್ಮೈಂಡ್ ಎನ್ನಲಾದ ಜೈಷ್ ಉಗ್ರ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ, ಅಬ್ದುಲ್ ರಶೀದ್ ಗಾಝಿ ಹಾಗೂ ಆತನ ಸಹಚರ ಕಮ್ರಾನ್ನನ್ನು ಭಾರತೀಯ ಸೇನಾ ಪಡೆಯ ಯೋಧರು ಸೋಮವಾರ ಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸುವ ಮೂಲಕ ಪ್ರತೀಕಾರದ ಸೇಡು ತೀರಿಸಿಕೊಂಡಿದ್ದಾರೆ.
ಈ ಪ್ರದೇಶದಲ್ಲಿ ಉಗ್ರರು ಅವಿತಿರುವ ಸುಳಿವನ್ನು ಅರಿತು , ಸೇನೆ ರಾತ್ರಿಯಿಂದಲೇ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು ಉಗ್ರರ ಹಾಗೂ ಸೇನಾಪಡೆಯ ಗುಂಡಿನ ಚಕಮಕಿಯಿಂದ ಭಾರತೀಯ ಸೇನೆಯ 55 ರಾಷ್ಟ್ರೀಯ ರೈಫಲ್ಸ್ ಪಡೆಗೆ ಸೇರಿದ ಮೇಜರ್ ಸಹಿತ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಈ ಗ್ರಾಮದಲ್ಲಿ ಕನಿಷ್ಟ ಇಬ್ಬರು ಅಥವಾ ಮೂವರು ಭಯೋತ್ಪಾದಕರು ಅಡಗಿರುವ ಬಗ್ಗೆ ಶಂಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ , ಉಗ್ರರ ಪತ್ತೆಗಾಗಿ ಸೇನೆಯ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.