ನವದೆಹಲಿ, ಅ 23 (DaijiworldNews/DB): ರಾಜಕೀಯ ಪಕ್ಷಗಳು ದೇಶದಲ್ಲಿ ಉಚಿತ ಕೊಡುಗೆ ಭರವಸೆ ನೀಡುತ್ತಿರುವುದನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ತರಾಟೆಗೆ ತೆಗೆದುಕೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ 2 ಉಚಿತ ಎಲ್ಪಿಜಿ ಸಿಲಿಂಡರ್ ನೀಡುವ ಭರವಸೆ ಉಚಿತ ಕೊಡಗೆ ಭರವಸೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮಧ್ಯ ಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದ್ದ ಮನೆಗಳ ಉದ್ಘಾಟನೆ ಬಳಿಕ ಶನಿವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜಕೀಯ ಪಕ್ಷಗಳ ಉಚಿತ ಕೊಡುಗೆ ಭರವಸೆಗಳನ್ನು ಟೀಕಿಸಿದ್ದರು. ಅಲ್ಲದೆ, ಈ ಹಿಂದೆಯೂ ಉಚಿತ ಕೊಡುಗೆಗಳನ್ನು ರೇವ್ಡಿ ಸಂಸ್ಕೃತಿ (ಮಿಠಾಯಿ ಸಂಸ್ಕೃತಿ) ಎಂದು ಮೋದಿ ಜರೆದಿದ್ದರು.
ಈ ಹಿನ್ನೆಲೆಯಲ್ಲಿ ಭಾನುವಾರ ಟ್ವೀಟ್ ಮಾಡಿರುವ ಚಿದಂಬರಂ, ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ 2 ಉಚಿತ ಎಲ್ಪಿಜಿ ಸಿಲಿಂಡರ್ ನೀಡುವ ಭರವಸೆ ಉಚಿತ ಕೊಡಗೆ ಭರವಸೆಯಲ್ಲವೇ ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಉಚಿತ ಕೊಡುಗೆಗಳಿಗೆ ಹಣ ವ್ಯರ್ಥ ಮಾಡುತ್ತಿರುವ ಬಗ್ಗೆ ತೆರಿಗೆದಾರರು ತಮ್ಮಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆಂದು ಪ್ರಧಾನಿ ಹೇಳುತ್ತಾರೆ. ಅವರು ತುಂಬಾ ಚೆನ್ನಾಗಿ ಹೇಳಿದ್ದಾರೆ. ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಎರಡು ಉಚಿತ ಎಲ್ಪಿಜಿ ಸಿಲಿಂಡರ್ ಘೋಷಣೆ ಮಾಡಿರುವುದು ಉಚಿತ ಕೊಡುಗೆಯಲ್ಲ ಎಂದು ನೀವು ಈ ವೇಳೆ ಸೇರಿಸಿಕೊಳ್ಳಬೇಕಿತ್ತು ಎಂದು ಲೇವಡಿ ಮಾಡಿದ್ದಾರೆ.
517 ಕಂಪನಿಗಳ 5,32,000 ಕೋಟಿ ರೂ. ಸಾಲವನ್ನು ಮನ್ನಾ ಮಾಡಲಾಗಿದೆ. ಇದು ಉಚಿತ ಕೊಡುಗೆಯಲ್ಲ ಎಂಬುದನ್ನೂ ಮೋದಿ ಹೇಳಬೇಕಿತ್ತು ಎಂದು ಚಿದಂಬರಂ ಪ್ರಧಾನಿ ಮೋದಿಯವರನ್ನು ಕೆಣಕಿದ್ದಾರೆ.