ನವದೆಹಲಿ, ಅ 20 (DaijiworldNews/DB): ಶಶಿ ತರೂರ್ ಮತ್ತವರ ಬೆಂಬಲಿತ ನಾಯಕರದ್ದು ಎರಡು ಮುಖ ಎಂದು ಕಾಂಗ್ರೆಸ್ ಚುನಾವಣಾ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಕ್ರಮ ಮತ್ತು ಪಕ್ಷಪಾತ ನಡೆದಿದೆ ಎಂದು ಆರೋಪಿಸಿದ್ದ ಶಶಿ ತರೂರ್ ವಿರುದ್ದ ಕಿಡಿ ಕಾರಿರುವ ಅವರು, ಅವರ ಆರೋಪಕ್ಕೆ ಮನ್ನಣೆ ನೀಡಿ ಯಾವುದೇ ಅಕ್ರಮ ಆಗದಿರುವ ಬಗ್ಗೆ ಅವರಿಗೆ ಮನವರಿಕೆ ಮಾಡಲಾಗಿದೆ. ನಮ್ಮ ಉತ್ತರಗಳಿಂದ ತೃಪ್ತರಾಗಿದ್ದರೂ, ಮಾಧ್ಯಮಗಳ ಮುಂದೆ ಹೋಗಿ ಅನಗತ್ಯವಾಗಿ ಮಾತನಾಡಿದ್ದಾರೆ. ಇದು ನಿಮ್ಮ ಇನ್ನೊಂದು ಮುಖವನ್ನು ಅನಾವರಣಗೊಳಿಸಿದೆ ಎಂದು ತರೂರ್ ಅವರ ಮುಖ್ಯ ಚುನಾವಣಾ ಏಜೆಂಟ್ ಸಲ್ಮಾನ್ ಸೋಜ್ಗೆ ಮಿಸ್ತ್ರಿ ಹೇಳಿದರು.
ಸೋಮವಾರ ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, ಮತ ಎಣಿಕೆ ನಡೆಯುತ್ತಿದ್ದಂತೆಯೇ ಉತ್ತರಪ್ರದೇಶದ ಚುನಾವಣಾ ನಿರ್ವಹಣೆಯಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ತರೂರ್ ಬೆಂಬಲಿತ ತಂಡವು ಮುಖ್ಯ ಚುನಾವಣಾ ಪ್ರಾಧಿಕಾರಕ್ಕೆ ಪತ್ರ ಬರೆದಿತ್ತು.