ವಡೋದರ, ಅ 18 (DaijiworldNews/DB): ಟ್ರಕ್ಗೆ ಬಸ್ ಢಿಕ್ಕಿ ಹೊಡೆದು 6 ಮಂದಿ ಸಾವನ್ನಪ್ಪಿದ ಘಟನೆ ಅಹಮದಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ.
ಐಷಾರಾಮಿ ಬಸ್ ರಾಜಸ್ಥಾನದಿಂದ ಸೂರತ್ಗೆ ತೆರಳುತ್ತಿತ್ತು. ಸೇತುವೆಯಲ್ಲಿ ಟ್ರಕ್ನ್ನು ಓವರ್ಟೇಕ್ ಮಾಡುವ ಭರದಲ್ಲಿ ಅದಕ್ಕೆ ಬಸ್ ಹಿಂಬದಿಯಿಂದ ಗುದ್ದಿದೆ. ಇದರಿಂದಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತಪಟ್ಟವರ ಪೈಕಿ ಓರ್ವ ಮಹಿಳೆ, ಒಂದು ಮಗು ಹಾಗೂ ನಾಲ್ವರು ಪುರುಷರು ಸೇರಿದ್ದಾರೆ ಎಂದು ಡಿಸಿಪಿ ಯಶ್ಪಾಲ್ ಜಗಾನಿಯ ತಿಳಿಸಿರುವುದಾಗಿ ವರದಿಯಾಗಿದೆ.
ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾನಿಗೇಟ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.