ಬೆಳಗಾವಿ, ಅ 15 (DaijiworldNews/DB): ಶೀಘ್ರ ದೆಹಲಿಗೆ ಭೇಟಿ ನೀಡಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ರಾಷ್ಟ್ರ ನಾಯಕರೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಂಕಲ್ಪ ಯಾತ್ರೆ ನಡೆಯುತ್ತಿರುವಾಗಲೇ ದೆಹಲಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯ ನಾಯಕರೊಂದಿಗೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಾಗುವುದು ಎಂದರು.
ಬೆಳಗಾವಿಗೆ ಸಂಪುಟ ವಿಸ್ತರಣೆಯಲ್ಲಿ ಶುಭಸುದ್ದಿ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಮೊದಲು ಮಾತುಕತೆ ನಡೆಸುತ್ತೇನೆ. ಆ ಬಳಿಕ ನಿರ್ಣಯ ಕೈಗೊಳ್ಳುತ್ತೇನೆ. ನಿರ್ಣಯ ಕೈಗೊಂಡ ಸಂದರ್ಭದಲ್ಲಿ ಯಾರ್ಯಾರಿಗೆ ಖಾತೆ ಸಿಗಲಿದೆ ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದರು.
ಕೊಲ್ಲಾಪುರದ ಕನೇರಿ ಮಠದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿವಸೇನೆಯಿಂದ ವಿರೋಧ ವ್ಯಕ್ತವಾಗಿರುವ ಬಗೆಗಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಹಾರಾಷ್ಟ್ರದಲ್ಲಿ ಹಲವು ಕನ್ನಡ ಭವನಗಳು ಪ್ರಸ್ತುತ ಇವೆ. ಯಾತ್ರಿ ನಿವಾಸಗಳೂ ಅಲ್ಲಿವೆ. ಇಂತಹ ವಿಚಾರದಲ್ಲಿ ರಾಜ್ಯ ಮತ್ತು ಭಾಷೆಗಳ ಮೂಲಕ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.