ಅರಿಯಲೂರು (ತಮಿಳುನಾಡು), ಅ 14 (DaijiworldNews/DB): ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಭಿಮಾನಿಗಳಿಬ್ಬರ ನಡುವೆ ತಮ್ಮಿಷ್ಟದ ಕ್ರಿಕೆಟಿಗನ ಕುರಿತಾಗಿ ನಡೆದ ಚರ್ಚೆ ಗಲಾಟೆಗೆ ತಿರುಗಿ ಕೊಹ್ಲಿ ಅಭಿಮಾನಿ ರೋಹಿತ್ ಅಭಿಮಾನಿಯನ್ನು ಹತ್ಯೆ ಮಾಡಿದ ಘಟನೆ ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿ ನಡೆದಿದೆ.
ಅರಿಯಲೂರು ಜಿಲ್ಲೆಯ ಪೊಯ್ಯೂರು ಎಂಬ ಗ್ರಾಮದಲ್ಲಿ ಘಟನೆ ನಡೆದಿದ್ದು, ರೋಹಿತ್ ಶರ್ಮಾ ಅಭಿಮಾನಿ ವಿಘ್ನೇಶ್ (24) ಎಂಬಾತನನ್ನು ಆತನ ಗೆಳೆಯ, ಕೊಹ್ಲಿ ಅಭಿಮಾನಿ ಧರ್ಮರಾಜ್ ಕೊಲೆ ಮಾಡಿದ್ದಾನೆ. ಮಂಗಳವಾರ ರಾತ್ರಿ ಇಬ್ಬರೂ ಕಂಠಪೂರ್ತಿ ಕುಡಿದಿದ್ದು, ಬಳಿಕ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರಲ್ಲಿ ಯಾರು ಉತ್ತಮರು ಎಂಬ ವಿಚಾರದಲ್ಲಿ ಮಾತಕತೆ ಆರಂಭವಾಗಿದೆ. ಬಳಿಕ ಮಾತುಕತೆಯು ಗಲಾಟೆಗೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ರೋಹಿತ್ ಅಭಿಮಾನಿ ವಿಘ್ನೇಶ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಕೊಹ್ಲಿಯನ್ನು ನಿಂದಿಸಿದ್ದಕ್ಕೆ ರೊಚ್ಚಿಗೆದ್ದ ಕೊಹ್ಲಿ ಅಭಿಮಾನಿ ಧರ್ಮರಾಜ್ ವಿಘ್ನೇಶ್ ತಲೆಗೆ ಬಾಟಲಿಯಿಂದ ಹೊಡೆದಿದ್ದಾನೆ. ಬಳಿಕ ಕೈಯಲ್ಲಿದ್ದ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ವಿಘ್ನೇಶ್ ವಿಪರೀತ ರಕ್ತಸ್ರಾವಕ್ಕೊಳಗಾಗಿ ಸಾವನ್ನಪ್ಪಿದ್ದಾನೆ. ಮರುದಿನ ಕೆಲಸಕ್ಕೆಂದು ಈ ದಾರಿಯಾಗಿ ತೆರಳುತ್ತಿದ್ದವರಿಗೆ ಮೃತದೇಹ ಕಂಡು ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಆರೋಪಿ ಧರ್ಮರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.
ವಿಘ್ನೇಶ್ ಐಟಿಐ ಮುಗಿಸಿದ್ದು, ಸಿಂಗಾಪುರದಲ್ಲಿ ಕೆಲಸ ಮಾಡುವ ಸಲುವಾಗಿ ವೀಸಾಗೆ ಅರ್ಜಿ ಸಲ್ಲಿಸಿದ್ದ. ಆದರೆ ಈ ನಡುವೆ ಆತ ಸಾವನ್ನಪ್ಪಿದ್ದಾನೆ.