ನವದೆಹಲಿ,ಫೆ 14(MSP): ಕೇವಲ 12ನೇ ತರಗತಿ ಓದಿದ ವ್ಯಕ್ತಿಯನ್ನು ದೇಶದ ಅತ್ಯುನ್ನತ ಹುದ್ದೆಯಾದ ಪ್ರಧಾನಿ ಹುದ್ದೆಗೆ ಮತ್ತೆ ಆಯ್ಕೆ ಮಾಡಬೇಡಿ ಎಂದು ದೆಹಲಿ ಸಿಎಂ,ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.
ಜಂತರ್ ಮಂತರ್ ನಲ್ಲಿ ನಡೆದ ವಿಪಕ್ಷಗಳ ಬೃಹತ್ ರಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಕ್ರೇಜಿವಾಲ್, ಪ್ರಧಾನಿ ಹುದ್ದೆ ಅತ್ಯಂತ ಜವಾಬ್ದಾರಿಯುತ ಹುದ್ದೆ. ಹನ್ನೆರಡನೇ ತರಗತಿ ಓದಿ ಪ್ರಧಾನಿಯಾದ ವ್ಯಕ್ತಿಗೆ, ತಾನು ಎಲ್ಲಿ ಸಹಿ ಮಾಡಬೇಕು, ಎಲ್ಲಿ ಮಾಡಬಾರದು ಎಂದು ತಿಳಿದಿರೋದಿಲ್ಲ. ಯಾವ ಯಾವ ಕಡತಗಳಿಗೆ ಎಲ್ಲಿ ಸಹಿ ಮಾಡಬೇಕು ಮತ್ತು ಮಾಡಬಾರದೆನ್ನುವ ಕನಿಷ್ಟ ಜ್ಞಾನವೂ ಇರುವುದಿಲ್ಲ. ಕಳೆದ ಬಾರಿ 12ನೇ ತರಗತಿ ಪಾಸಾದ ವ್ಯಕ್ತಿಯನ್ನು ಪ್ರಧಾನಿ ಹುದ್ದೆಯಲ್ಲಿ ಕುಳ್ಳಿರಿಸಿದ್ದಾರೆ. ಅದರ ಪರಿಣಾಮ ಏನಾಗಿದೆ ಎಂದು ದೇಶಕ್ಕೆ ತಿಳಿದಿದೆ. ಹೀಗಾಗಿ ಮತ್ತೆ ಅದೇ ತಪ್ಪನ್ನು ಜನ ಮಾಡಬಾರದು ಎಂದು ಕೇಳಿಕೊಂಡರು.
ಕಳೆದ ಬಾರಿ ಹನ್ನೆರಡನೇ ತರಗತಿ ಓದಿದ ವ್ಯಕ್ತಿ ಪ್ರಧಾನಿ ಆದ ಕಾರಣ ದೇಶದ ಜನರ ಆಶೋತ್ತರಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹೀಗಾಗಿ ಈ ಬಾರಿಯಾದರೂ ಅತ್ಯುತ್ತಮ ವ್ಯಕ್ತಿಗಳನ್ನು ಉನ್ನತ ಶಿಕ್ಷಣ ಪಡೆದವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಬೇಕಾಗಿದೆ ಎಂದು ಹೇಳಿದರು.