ಚಿತ್ರದುರ್ಗ, ಅ 08 (DaijiworldNews/MS): ಇತ್ತೀಚೆಗೆ ಸಾಕಷ್ಟು ಸುದ್ದ್ಯಲ್ಲಿರುವ ಮುರುಘಾಮಠದಲ್ಲಿ ವಿಚಿತ್ರ ಕಳ್ಳತನವೊಂದು ನಡೆದಿದೆ. ಮಠದ ರಾಜಾಂಗಣದ ಗೋಡೆಗೆ ಹಾಕಿದ್ದ 47 ಫೋಟೊಗಳು ಕಳುವಾಗಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವಶ್ರೀ ಪ್ರಶಸ್ತಿ ಪ್ರದಾನ, ಮುರುಘಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಠಕ್ಕೆ ಭೇಟಿ ನೀಡಿದ ಗಣ್ಯರೊಂದಿಗೆ ಶಿವಮೂರ್ತಿ ಮುರುಘಾ ಶರಣರು ಇದ್ದ ಹಲವು ಫೋಟೊಗಳನ್ನು ರಾಜಾಂಗಣದಲ್ಲಿ ಹಾಕಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಾಸಕ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಸೇರಿದಂತೆ ಹಲವರೊಂದಿಗೆ ಮುರುಘಾಶ್ರೀ ಇದ್ದ ಚಿತ್ರಗಳು ಇಲ್ಲಿದ್ದವು. ಈ ಎಲ್ಲ ಫೋಟೊಗಳು ಅ.5ರಂದು ರಾತ್ರಿ ಕಳುವಾಗಿವೆ ಎಂದು ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಬಿ.ವಸ್ತ್ರಮಠ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇಬ್ಬರು ವ್ಯಕ್ತಿಗಳು ಈ ಪೋಟೋ ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.