ದುಮ್ಕಾ, ಅ 08 (DaijiworldNews/DB): ಮದುವೆಯಾಗುವುದಕ್ಕೆ ಒಲ್ಲೆ ಎಂದದ್ದಕ್ಕೆ ವಿವಾಹಿತನೋರ್ವ ಯುವತಿ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಘಟನೆ ಜಾರ್ಖಂಡ್ನ ದುಮ್ಕಾದಲ್ಲಿ ನಡೆದಿದೆ.
19 ವರ್ಷದ ತೀವ್ರ ಸುಟ್ಟ ಗಾಯಗಳೊಂದಿಗೆ ಸಾವನ್ನಪ್ಪಿದ್ದಾಳೆ. ಆರೋಪಿ ರಾಜೇಶ್ ರಾವುತ್ನನ್ನು ಬಂಧಿಸಲಾಗಿದೆ. ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಯುವತಿಯನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ. ಆದರೆ ಆಕೆಯ ಪೋಷಕರು ಆತನೊಂದಿಗೆ ಮದುವೆ ಮಾಡಿಸಲು ಸಿದ್ದರಿರಲಿಲ್ಲ. ಇದರಿಂದ ಯುವತಿಯ ಮನೆಗೆ ಪ್ರವೇಶಿಸಿದ ಆತ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟದಲ್ಲಿದ್ದ ಯುವತಿಯನ್ನು ರಾಂಚಿಯ ಆರ್ಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದಳು ಎಂದು ಜರ್ಮುಂಡಿ ಡಿಎಸ್ಪಿ ಶಿವೇಂದ್ರ ತಿಳಿಸಿರುವುದಾಗಿ ವರದಿಯಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ.
ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಮಾತನಾಡಿ, ಅಪರಾಧಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.
ದುಮ್ಕಾದಲ್ಲಿ ಒಂದೂವರೆ ತಿಂಗಳ ಅಂತರದಲ್ಲಿ ಇದು ಎರಡನೇ ಘಟನೆಯಾಗಿದೆ. ಆಗಸ್ಟ್ 23ರಂದು ಇದೇ ನಗರದಲ್ಲಿ 16 ವರ್ಷದ ಬಾಲಕಿಯನ್ನು ಇಬ್ಬರು ಯುವಕರು ಪೆಟ್ರೋಲ್ ಸುರಿದು ಹತ್ಯೆ ಮಾಡಿದ್ದರು.