ಮೈಸೂರು, ಅ 08 (DaijiworldNews/MS): ಬೆಂಗಳೂರು -ಮೈಸೂರು ನಡುವೆ ದಿನಂಪ್ರತಿ ಸಂಚರಿಸುವ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು 'ಒಡೆಯರ್ ಎಕ್ಸ್ಪ್ರೆಸ್' ಎಂದು ಮರುನಾಮಕರಣ ಮಾಡಿ ಕೇಂದ್ರ ರೈಲ್ವೆ ಸಚಿವಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಹಾಗೆಯೇ ತಾಳಗುಪ್ಪ-ಮೈಸೂರು ನಡುವೆ ಸಂಚರಿಸುವ ತಾಳಗುಪ್ಪ ಎಕ್ಸ್ಪ್ರೆಸ್ ರೈಲಿನ ಹೆಸರನ್ನು 'ಕುವೆಂಪು ಎಕ್ಸ್ಪ್ರೆಸ್' ಎಂದು ಮರುನಾಮಕರಣ ಮಾಡಲಾಗಿದೆ.
ಫೆಬ್ರವರಿ ತಿಂಗಳಿನಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಬೇಕೆಂದು ದೆಹಲಿಯಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ಗೆ ಲಿಖಿತ ಮನವಿ ಸಲ್ಲಿಸಿದ್ದರು. ಈಗಾಗಲೆ ಸಾಕಷ್ಟು ಜನರು ರೈಲಿನ ಹೆಸರನ್ನು ಬದಲಾಯಿಸಲು ಒತ್ತಾಯ ಮಾಡಿದ್ದಾರೆ. ಏಕೆಂದರೆ ಮೈಸೂರಿಗೆ ರೈಲು ಸಂಪರ್ಕ ತರಬೇಕೆಂಬುದು ಮೈಸೂರಿನ ಒಡೆಯರ್ ವಂಶಸ್ಥರ ಕನಸಾಗಿತ್ತು. ಅದಕ್ಕಾಗಿ ಸಾಕಷ್ಟು ಶ್ರಮಿಸಿದ್ದರು. ಹಾಗಾಗಿ ಟಿಪ್ಪು ಎಕ್ಸ್ಪ್ರೆಸ್ ಹೆಸರಿನ ಬದಲು ಒಡೆಯರ್ ಎಕ್ಸ್ಪ್ರೆಸ್ ಎಂದು ಬದಲಾಯಿಸುತ್ತೇವೆ ಎಂದು ತಿಳಿಸಿದ್ದರು. ಇದಲ್ಲದೆ ಹೆಸರು ಬದಲಾವಣೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನವೂ ನಡೆಸಲಾಗಿತ್ತು. ಈಗ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ.