ಲಕ್ನೋ, ಅ 07 (DaijiworldNews/MS): ನಟ ಪ್ರಭಾಸ್ ಅಭಿನಯದ 'ಆದಿಪುರುಷ್' ಚಲನಚಿತ್ರದಲ್ಲಿ ಭಗವಾನ್ ರಾಮ, ಹನುಮಾನ್ ಮತ್ತು ರಾವಣನನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂಬ ವಿವಾದಾತ್ಮಕ ಚರ್ಚೆಯ ನಡುವೆ , ಈ ಚಿತ್ರವನ್ನು ನಿಷೇಧಿಸಬೇಕು ಮತ್ತು ʼಹಿಂದೂಗಳ ಕ್ಷಮೆʼಯಾಚಿಸಬೇಕು ಎಂದು ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ.
ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಇತರರು ನಟಿಸಿರುವ ಈ ಚಿತ್ರದಲ್ಲಿ ಭಗವಾನ್ ಶ್ರೀರಾಮ, ಹನುಮಂತನನ್ನು ಮಹಾಕಾವ್ಯದಲ್ಲಿ ವಿವರಿಸಿರುವಂತೆ ತೋರಿಸಲಾಗಿಲ್ಲ. ಇದು ಘನತೆಗೆ ವಿರುದ್ಧವಾಗಿದೆ. ಸಿನಿಮಾ ಮಾಡುವುದು ಅಪರಾಧವಲ್ಲ ಆದರೆ ಉದ್ದೇಶಪೂರ್ವಕವಾಗಿ ವಿವಾದಗಳನ್ನು ಸೃಷ್ಟಿಸಬಾರದು ಎಂದು ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ಅಲ್ಲದೆ ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ. ಹಿಂದೂಗಳ ಕ್ಷಮೆಯಾಚಿಸದಿದ್ದರೆ ಬಹಿಷ್ಕಾರದ ಎಚ್ಚರಿಕೆ ಕೂಡ ನೀಡಲಾಗಿದೆ.ಹೀಗಾಗಿ ಚಿತ್ರವನ್ನು ನಿಷೇಧಿಸುವಂತೆ ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ.