ಬಾರಮುಲ್ಲಾ, ಅ 05 (DaijiworldNews/MS): ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಿಲ್ಲ ಆದರೆ ಕಾಶ್ಮೀರದ ಯುವಕರೊಂದಿಗೆ ಮಾತುಕತೆ ನಡೆಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಕಾಶ್ಮೀರದಲ್ಲಿ ಬಿಜೆಪಿ ಉದ್ಯೋಗ ಸೃಷ್ಟಿಗೆ ಹೂಡಿಕೆ ಮಾಡುತ್ತಿರುವಾಗ ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬಗಳು ಉಗ್ರಗಾಮಿತ್ವ ಮತ್ತು ಪ್ರತ್ಯೇಕತಾವಾದವನ್ನು ಬೆಂಬಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬ ಪಾಕಿಸ್ತಾನದೊಂದಿಗೆ ಮಾತನಾಡಲು ನನಗೆ ಹೇಳುತ್ತಾರೆ. ಆದರೆ ನಾನು ಮಾಡುವುದಿಲ್ಲ. ಬೇಕಿದ್ದರೆ ನಾನು ಕಾಶ್ಮೀರದ ಯುವಕರು ಮತ್ತು ಗುಜ್ಜರ್-ಬಕರ್ವಾಲ್ ಮತ್ತು ಪಹಾರಿ ಜನರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಯಾರಾದರೂ ಹತ್ಯೆಯಾದಾಗ ನನಗೆ ನೋವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ರ್ಯಾಲಿಯನ್ನ ನಡೆಸಲು ಯೋಜನೆ ರೂಪಿಸಿದಾಗ, ಬಾರಾಮುಲ್ಲಾ ಕಾರ್ಯಕ್ರಮವನ್ನ ಕೇಳಲು ಯಾರು ಬರುತ್ತಾರೆ ಎಂದು ಕೆಲವರು ಹೇಳಿದರು. ನಾನು ಇಂದು ಅವರಿಗೆ ಹೇಳ ಬಯಸುವುದೇನೆಂದರೆ, ಈ ಕಾರ್ಯಕ್ರಮದಲ್ಲಿ, ಕಾಶ್ಮೀರದ ಈ ಸುಂದರ ಕಣಿವೆಯಲ್ಲಿ ಅಭಿವೃದ್ಧಿಯ ಕಥೆಯನ್ನ ಕೇಳಲು ಮತ್ತು ಮೋದಿಯವರನ್ನ ಬೆಂಬಲಿಸಲು ಸಾವಿರಾರು ಜನರಿದ್ದಾರೆ ಎಂದು ಹೇಳಿದರು.
ಕಳೆದ 70 ವರ್ಷಗಳಲ್ಲಿ, ಮುಫ್ತಿ ಮತ್ತು ಕಂಪನಿ, ಅಬ್ದುಲ್ಲಾ ಮತ್ತು ಅವರ ಪುತ್ರರು ಇಲ್ಲಿ ಅಧಿಕಾರದಲ್ಲಿದ್ದರು. ಆದರೆ 1 ಲಕ್ಷ ನಿರಾಶ್ರಿತರಿಗೆ ವಸತಿ ಒದಗಿಸಲಿಲ್ಲ. ಪ್ರಧಾನಿ ಮೋದಿಯವರು 2014-2022 ರ ನಡುವೆ ಈ 1 ಲಕ್ಷ ಜನರಿಗೆ ಮನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.