ತೆಲಂಗಾಣ, ಅ 05 (DaijiworldNews/MS): ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ತಮ್ಮ ರಾಷ್ಟ್ರೀಯ ಪಕ್ಷದ ಹೆಸರನ್ನು 'ಭಾರತ್ ರಾಷ್ಟ್ರ ಸಮಿತಿ ಎಂದು ಮರುನಾಮಕರಣ ಮಾಡಿದ್ದಾರೆ.
ಬುಧವಾರ ಮಧ್ಯಾಹ್ನ 1:19 ಕ್ಕೆ ಹೈದರಾಬಾದ್ನಲ್ಲಿರುವ ಪಕ್ಷದ ಪ್ರಧಾನ ಕಛೇರಿ ತೆಲಂಗಾಣ ಭವನದಲ್ಲಿ ಪಕ್ಷದ ಮುಖಂಡರು, ಸಚಿವರು, ಸಂಸದರು, ಶಾಸಕರು, ಎಂಎಲ್ಸಿಗಳು ಮತ್ತು ಜಿಲ್ಲಾ ಮಟ್ಟದ ಸಮಾವೇಶದಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷವಾದ ಭಾರತ ರಾಷ್ಟ್ರ ಸಮಿತಿಯನ್ನು ಪ್ರಾರಂಭಿಸಲಿದ್ದಾರೆ.
283 ಸದಸ್ಯರು ಹೆಸರು ಬದಲಾವಣೆ ಪ್ರಸ್ತಾವನೆಗೆ ಸರ್ವಾನುಮತದ ಒಪ್ಪಿಗೆ ನೀಡಲಿದ್ದಾರೆ. ಮಧ್ಯಾಹ್ನ 1.19ಕ್ಕೆ ಈ ನಿರ್ಣಯಕ್ಕೆ ಕೆಸಿಆರ್ ಸಹಿ ಹಾಕಲಿದ್ದು, ಆ ಮೂಲಕ ಸದಸ್ಯರು ಅಂಗೀಕರಿಸಿದ ನಿರ್ಣಯದ ಕುರಿತು ಹೇಳಿಕೆ ನೀಡಲಿದ್ದಾರೆ.
ಈ ವೇಳೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ, ತಮಿಳುನಾಡು ವಿಸಿಕೆ ಪಕ್ಷದ ಅಧ್ಯಕ್ಷ, ಸಂಸದ ತಿರುಮಾವಲವನ್ ಮತ್ತು ಇತರರು ವಿಶೇಷ ಆಹ್ವಾನಿತರಾಗಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ತೆಲಂಗಾಣ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ವಿನೋದ್ ಕುಮಾರ್ ಮತ್ತು ಶ್ರೀನಿವಾಸ್ ರೆಡ್ಡಿ ಅವರು ಅಂತಿಮಗೊಳಿಸಿದ ಪಕ್ಷದ ಹೆಸರ ನಿರ್ಣಯಕ್ಕೆ ಅನುಮೋದನೆ ಪಡೆಯಲು ಗುರುವಾರ ದೆಹಲಿಗೆ ತೆರಳಲಿದೆ. ಪಕ್ಷದ ಹೆಸರು ಬದಲಾವಣೆಯ ನಿರ್ಣಯಕ್ಕೆ ಅನುಮೋದನೆ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೂ ಅಫಿಡವಿಟ್ ಸಲ್ಲಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗವು ಈ ಕುರಿತು ಅಧಿಸೂಚನೆಯನ್ನು ಹೊರಡಿಸಲಿದ್ದು, ನಿರ್ಧಾರದ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಲು ಒಂದು ತಿಂಗಳ ಅವಧಿ ನಿಗಧಿಗೊಳಿಸಿದ್ದು, ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಪಕ್ಷದ ಹೆಸರು ಅಂತಿಮಗೊಳಿಸಲಾಗುತ್ತದೆ.