ನಾಗ್ಪುರ, ಅ 05 (DaijiworldNews/MS): ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನವು ನಿರ್ಲಕ್ಷಿಸಲಾಗದ ಪ್ರಮುಖ ವಿಷಯವಾಗಿದೆ. ಜನಸಂಖ್ಯೆಯ ಅಸಮತೋಲನವು ಭೌಗೋಳಿಕ ಗಡಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ಆರ್ಎಸ್ಎಸ್ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಹೇಳಿದ್ದಾರೆ.
ಆರ್ಎಸ್ಎಸ್ ಸಂಸ್ಥಾಪನಾ ದಿನವಾದ ವಿಜಯದಶಮಿಯ ಪ್ರಯುಕ್ತ ಮಹಾರಾಷ್ಟ್ರದ ನಾಗಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತನಾಡಿದ್ದಾರೆ. ವಿಜಯ ದಶಮಿ ಭಾಷಣವು ಸಮಾಜದ ಅನೇಕ ವಿಚಾರಗಳ ಕುರಿತು ಆರ್ಎಸ್ಎಸ್ನ ನಿಲುವನ್ನು ಸ್ಪಷ್ಟಪಡಿಸುವ ಮಹತ್ವದ ಕಾರ್ಯಕ್ರಮ ಎಂದು ಭಾವಿಸಲಾಗುತ್ತಿದೆ.
ಅಲ್ಪಸಂಖ್ಯಾತರಿಗೆ ಅಪಾಯವಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಭಾಗವತ್, ಅಲ್ಪಸಂಖ್ಯಾತರಿಗೆ ಬೆದರಿಕೆ ಹಾಕುವ ಕೃತ್ಯಗಳು 'ಸಂಘದ ಸ್ವರೂಪವೂ ಅಲ್ಲ, ಹಿಂದೂಗಳದ್ದೂ ಅಲ್ಲ' ಎಂದಿದ್ದಾರೆ.
ಸಹೋದರತ್ವ, ಸೌಹಾರ್ದತೆ ಮತ್ತು ಶಾಂತಿಯ ಪರವಾಗಿ ನಿಲ್ಲಲು ಸಂಘವು ನಿರ್ಧರಿಸುತ್ತದೆ ಎಂದು ಭಾಗವತ್ ಹೇಳಿದರು. ದೇವಸ್ಥಾನ, ನೀರು ಮತ್ತು ಸ್ಮಶಾನ ಎಲ್ಲರಿಗೂ ಸಾಮಾನ್ಯವಾಗಿರಬೇಕು ಎಂದು ಪ್ರತಿಪಾದಿಸಿದ್ದಾರೆ.
ಸಿಬಿಐ/ಇಡಿ ದಾಳಿಗಳ ಪ್ರತಿಕ್ರಿಯೆ:
ಕೆಲವು ರಾಜಕೀಯ ನಾಯಕರ ಮೇಲೆ ಸಿಬಿಐ/ಇಡಿ ದಾಳಿಗಳ ಕುರಿತು ನಡೆಯುತ್ತಿರುವ ರಾಜಕೀಯ ಹಕ್ಕುಗಳು ಮತ್ತು ಪ್ರತಿವಾದಗಳ ನಡುವೆ, ಮೋಹನ್ ಭಾಗವತ್ ಅವರು, ನಮ್ಮ ಸರ್ಕಾರಿ ಸಂಸ್ಥೆಗಳು , ದೇಶ ವಿರೋಧಿ ಅಂಶಗಳ ವಿರುದ್ಧ ಕಾರ್ಯಾಚರಣೆ ಮಾಡುತ್ತಿದೆ ನಾವು ಬೆಂಬಲಿಸಬೇಕು ಎಂದು ಹೇಳಿದರು.
ಉದ್ಯೋಗ ಸೃಷ್ಟಿ:
ಉದ್ಯೋಗ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ಪ್ರತಿಪಕ್ಷಗಳ ಕೂಗಿಗೆ ಪ್ರತಿಕ್ರಿಯಿಸಿದ ಅವರು ಉದ್ಯೋಗ ಮತ್ತು ಉದ್ಯೋಗವಕಾಶಗಳಿಗೆ ಸರ್ಕಾರ ಮಾತ್ರ ಜವಾಬ್ದಾರರಾಗಬಾರದು ಅದಕ್ಕಾಗಿ ಸಮಾಜ ಮತ್ತು ಜನರು ಕೂಡ ಶ್ರಮಿಸಬೇಕು ಎಂದರು.
ಮಹಿಳಾ ಸಬಲೀಕರಣಕ್ಕಾಗಿ ಭಗವತ್ ಬ್ಯಾಟಿಂಗ್:
ಮಹಿಳೆಯರನ್ನು ಸಮಾನತೆಯಿಂದ ಕಾಣುವ ಅಗತ್ಯವಿದೆ ಮತ್ತು ಅವರ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯದೊಂದಿಗೆ ಅವರನ್ನು ಸಬಲೀಕರಣಗೊಳಿಸುವ ಅಗತ್ಯವಿದೆ ಎಂದು ಹೇಳಿದರು.