ನವದೆಹಲಿ, ಅ 04 (DaijiworldNews/DB): ಪ್ರೀತಿಯ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಘನ್ ಪುರದ ಜನಗಮ ಜಿಲ್ಲಾ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿ ರಘುಚಂದರ್ ಈ ಕುರಿತು ಮಾಹಿತಿ ನೀಡಿದ್ದು, ಚಿಲ್ಪುರ್ ಮಂಡಲದ ಶ್ರೀಪತಿಪಲ್ಲಿಯ ಗುರ್ರಾಮ್ ಶ್ಯಾಮ್ ಮತ್ತು ತುಪಕುಲಾ ಸಾಂಬರಾಜು ಶ್ಯಾಮ್ ಬಂಧಿತರು. ಗುರ್ರಾಮ್ ಶ್ಯಾಮ್ 16 ವರ್ಷದ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿದ್ದ. ಬಳಿಕ ಸಾಂಬರಾಜು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನ್ನು ಗುರ್ರಾಮ್ ಶ್ಯಾಮ್ ವೀಡಿಯೋ ಮಾಡಿದ್ದ. ಬಳಿಕ ಈ ವೀಡಿಯೋವನ್ನು ಪರಿಚಿತರಿಗೆ ಕಳುಹಿಸಿದ್ದು, ಅದು ವೈರಲ್ ಆಗಿದೆ. ಇದು ಸಂತ್ರಸ್ತೆಯ ತಾಯಿಗೆ ತಿಳಿದು ಕೂಡಲೇ ಆಕೆ ಚಿಲ್ಪುರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಬಾಲಕಿಯನ್ನು ವಿಚಾರಣೆ ನಡೆಸಿದ ಪೊಲೀಸರು ಆಕೆಯ ಹೇಳಿಕೆ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಆನಂತರ ವೀಡಿಯೋವನ್ನು ಇತರ ನಾಲ್ವರು ಹುಡುಗಿಯರಿಗೆ ತೋರಿಸಿದ್ದು, ನಾವು ಹೇಳಿದಂತೆ ಕೇಳದಿದ್ದರೆ ನಿಮ್ಮ ವೀಡಿಯೋಗಳನ್ನೂ ತೆಗೆಯಲಾಗುವುದು ಎಂದು ಬೆದರಿಕೆ ಹಾಕಿದ್ದರು. ಸದ್ಯ ಇಬ್ಬರು ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ರಿಮಾಂಡ್ಗೆ ಕಳುಹಿಸಲಾಗಿದೆ ಎಂದರು.