ಜಮ್ಮು, ಅ 04 (DaijiworldNews/MS): ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪ್ರಧಾನ ನಿರ್ದೇಶಕ (ಕಾರಾಗೃಹ) ಹೇಮಂತ್ ಕುಮಾರ್ ಲೋಹಿಯಾ ಹತ್ಯೆ ಮಾಡಿದ್ದ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಜಮ್ಮುವಿನಲ್ಲಿ ಅವರು ಕೊಲೆಯಾಗಿದ್ದರು. ಅವರ ಮನೆಯ ಸಹಾಯಕ 23 ವರ್ಷದ ಯಾಸೀರ್ ಅಹಮ್ಮದ್ ಲೋಹಿಯಾ ಅವರ ಕತ್ತು ಸೀಳಿ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.
ತಲೆಮರೆಸಿಕೊಂಡಿದ್ದ ಆತ ಪೊಲೀಸರ ಬಲೆಗೆ ಬಿದ್ದಿದ್ದು, ಅಧಿಕಾರಿ ಲೋಹಿಯಾ ಅವರ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲಾಗಿದೆ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ತಿಳಿಸಿದ್ದಾರೆ.
ಮನೆ ಕೆಲಸ ಮಾಡುತ್ತಿದ್ದ ಯಾಸೀರ್ ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
1992ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದ 57 ವರ್ಷದ ಲೋಹಿಯಾ ಅವರು ಜಮ್ಮುವಿನ ಹೊರವಲಯದಲ್ಲಿರುವ ಉದಯವಾಲಾ ನಿವಾಸದಲ್ಲಿ ನೆಲೆಸಿದ್ದರು. ಅಲ್ಲಿಯೇ ಅವರನ್ನು ಕೊಲೆ ಮಾಡಲಾಗಿದೆ.ಅವರನ್ನು ಆಗಸ್ಟ್ನಲ್ಲಿ ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ನಿಯೋಜಿಸಲಾಗಿತ್ತು. ಅಧಿಕಾರಿ ಸಾವಿಗೆ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆ ತೀವ್ರ ಬೇಸರ ವ್ಯಕ್ತಪಡಿಸಿದೆ.