ಮುಂಬೈ, ಅ 04 (DaijiworldNews/DB): ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಹೆಸರಿನಲ್ಲಿ 700 ಆರೋಗ್ಯ ಚಿಕಿತ್ಸಾಲಯಗಳನ್ನು (ಆಪ್ಲಾ ದವಾಖಾನ) ಸರ್ಕಾರ ಸ್ಥಾಪನೆ ಮಾಡಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಮಂಗಳವಾರ ಈ ಕುರಿತು ಮಾಹಿತಿ ನೀಡಿರುವ ಅವರು, ಜನರ ಮನೆ ಸನಿಹದಲ್ಲಿಯೇ ವೈದ್ಯಕೀಯ ಸೌಲಭ್ಯ ಒದಗಿಸುವುದು ಆಪ್ಲಾ ದವಾಖಾನ ಸ್ಥಾಪನೆಯ ಉದ್ದೇಶ. ಮುಂಬೈಯಲ್ಲಿ 227 ಚಿಕಿತ್ಸಾಲಯ ಸಹಿತ ಮಹಾರಾಷ್ಟ್ರದಲ್ಲಿ ಒಟ್ಟು 700 ಆರೋಗ್ಯ ಚಿಕಿತ್ಸಾಲಯಗಳನ್ನು ತೆರೆಯಲಾಗುವುದು. ಈ ಪೈಕಿ 50 ಚಿಕಿತ್ಸಾಲಯಗಳು ಅಕ್ಟೋಬರ್ 2ರಂದು ಕಾರ್ಯಾರಂಭ ಮಾಡಿವೆ ಎಂದರು.
ಆರೋಗ್ಯ ಕ್ಷೇತ್ರದ ಬಲವರ್ಧನೆ ಮತ್ತು ಮೂಲ ಸೌಕರ್ಯ ನೀಡಿ ಜನರಿಗೆ ಗುಣಮಟ್ಟದ ಆರೋಗ್ಯ ಸಿಗುವಂತೆ ಮಾಡುವುದು ನಮ್ಮ ಸರ್ಕಾರದ ಆದ್ಯತೆ. ಆರೋಗ್ಯ ಬಜೆಟ್ನ್ನು ಕೂಡಾ ದ್ವಿಗುಣ ಮಾಡಿ ಸುಸ್ಥಿರ ಆರೋಗ್ಯಕ್ಕಾಗಿ ಶ್ರಮಿಸಲಾಗುವುದು ಎಂದವರು ತಿಳಿಸಿದರು.
ಗುಣಮಟ್ಟದ ಚಿಕಿತ್ಸೆ ಗ್ರಾಮ್ಯ ಭಾಗದ ಜನರಿಗೂ ಸಿಗುವಂತಾಗಲು ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ತೆರೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪ ಆಸ್ಪತ್ರೆಗಳು ಮತ್ತು ಗ್ರಾಮೀಣ ಆಸ್ಪತ್ರೆಗಳಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ವಿವರಿಸಿದರು.