ಮುಂಬೈ, ಅ 04 (DaijiworldNews/DB): 100 ಕೋಟಿ ರೂ. ಹಗರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರಿಗೆ ಎಂಟು ತಿಂಗಳ ಬಳಿಕ ಜಾಮೀನು ದೊರೆತಿದೆ. 1 ಲಕ್ಷ ರೂ.ಗಳ ಭದ್ರತಾ ಠೇವಣಿಯ ಮೇಲೆ ಅವರಿಗೆ ಜಾಮೀನು ಲಭ್ಯವಾಗಿದೆ.
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಳೆದ ವಾರ ಬಾಂಬೆ ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆ ನಡೆಸಿ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಇಂದು (ಅಕ್ಟೋಬರ್ 4) ಜಾಮೀನು ನೀಡಿ ಆದೇಶಿಸಿದೆ.
ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರ ಲೆಟರ್ ಬಾಂಬ್ ಪ್ರಕರಣದಲ್ಲಿ ದೇಶ್ಮುಖ್ ಅವರನ್ನು ಜಾರಿ ನಿರ್ದೇಶನಾಲಯವು ಕಳೆದ ನವೆಂಬರ್ 2ರಂದು ಬಂಧಿಸಿತ್ತು. ಈ ನಡುವೆ ಜಾಮೀನಿಗಾಗಿ ಅವರು ಅರ್ಜಿ ಸಲ್ಲಿಸಿದ್ದರೂ ಪಿಎಂಎಲ್ಎ ನ್ಯಾಯಾಲಯ ಅದನ್ನು ಪುರಸ್ಕರಿಸಿರಲಿಲ್ಲ. ಹೀಗಾಗಿ ಪಿಎಂಎಲ್ಎ ನ್ಯಾಯಾಲಯದ ತೀರ್ಪನ್ನು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. 73 ವರ್ಷದ ದೇಶ್ಮುಖ್ ಅವರು ಅನಾರೋಗ್ಯ ವತ್ತು ವಯಸ್ಸು ಏರುತ್ತಿರುವ ಬಗ್ಗೆಯೂ ಅವರು ಕಾರಣ ನೀಡಿದ್ದರು.