ಅಹ್ಮದಾಬಾದ್, ಅ 04 (DaijiworldNews/DB): ಬೈಕ್ನಲ್ಲಿ ಹಿಂಬದಿ ಸವಾರನಾಗಿ ಸಂಚರಿಸುತ್ತಿದ್ದ ನನ್ನ ಸಂಬಂಧಿಯ ಸಾವಿಗೆ ನಾನೇ ಕಾರಣ ಎಂದು ವ್ಯಕ್ತಿಯೊಬ್ಬ ತನ್ನ ವಿರುದ್ದವೇ ಪೊಲೀಸರಿಗೆ ದೂರು ನೀಡಿದ ಅಚ್ಚರಿಯ ಘಟನೆ ಅಹ್ಮದಾಬಾದ್ನಲ್ಲಿ ನಡೆದಿದೆ.
ರಾಹುಲ್ ವಂಜ್ಹಾರಾ (23) ಎಂಬ ವ್ಯಕ್ತಿ ತನ್ನ ವಿರುದ್ದವೇ ಖೇಡಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಈತನ ಸಹೋದರ ಸಂಬಂಧಿಯಾದ ಹಷ್ಮುಖ್ ವಂಜ್ಹಾರಾ (37) ಮೃತಪಟ್ಟ ವ್ಯಕ್ತಿ. ರಾಹುಲ್ ಮತ್ತು ಹಷ್ಮುಖ್ ಶನಿವಾರ ಸಂಜೆ ಬೈಕ್ನಲ್ಲಿ ಖೇಡಾದ ದರ್ವಾಜಾ ಬಳಿಯಲ್ಲಿರುವ ವರ್ಕ್ಶಾಪ್ಗೆ ಹೋಗಿದ್ದರು. ಬಳಿಕ ಇಬ್ಬರೂ ಚಹಾ ಸೇವನೆಗೆಂದು ಪಕ್ಕದ ಮಾರುಕಟ್ಟೆಗೆ ತೆರಳಿದ್ದಾರೆ. ಈ ವೇಳೆ ಕಡಿದಾದ ತಿರುವಿನಲ್ಲಿ ದನವೊಂದು ಬೈಕ್ಗೆ ಅಡ್ಡಬಂದಿತ್ತು. ಹಸುವಿಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಬೈಕ್ ಬಿದ್ದು ಹಿಂಬದಿ ಸವಾರನಾಗಿದ್ದ ಹಷ್ಮುಖ್ ರಸ್ತೆ ಪಕ್ಕದ ಪೊದೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದ. ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಲಾಯಿತಾದರೂ ಆ ವೇಳೆಗಾಗಲೇ ಹಷ್ಮುಖ್ ಸಾವನ್ನಪ್ಪಿದ್ದ. ಇದರಿಂದ ಬೇಸರಗೊಂಡ ರಾಹುಲ್, ತನ್ನ ನಿರ್ಲಕ್ಷ್ಯ ಮತ್ತು ವೇಗದೂತ ಚಲನೆಯೇ ಅಪಘಾತಕ್ಕೆ ಕಾರಣ ಎಂದು ತನ್ನ ವಿರುದ್ದವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ರಾಹುಲ್ ವಿರುದ್ಧ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಗಾಗಿ ಪ್ರಕರಣ ದಾಖಲಿಸಲಾಗಿದೆ. ರಸ್ತೆಯಲ್ಲಿ ದನವನ್ನು ಬಿಟ್ಟದ್ದು ಮಾಲಕನ ತಪ್ಪು. ಆದರೆ ಅಪಘಾತಕ್ಕೆ ಹಸು ಮತ್ತು ಮಾಲೀಕನನ್ನು ಹೊಣೆ ಮಾಡಲು ಸಾಧ್ಯವಾಗುವುದಿಲ್ಲ. ನನ್ನ ನಿರ್ಲಕ್ಷ್ಯ ಮತ್ತು ಅತಿ ವೇಗದ ಚಾಲನೆಯಿಂದಾಗಿ ಹಿಂಬದಿ ಸವಾರ ಸಾವನ್ನಪ್ಪಿದ್ದಾನೆ. ಇದಕ್ಕಾಗಿ ತನ್ನ ವಿರುದ್ದವೇ ದೂರು ದಾಖಲಿಸಿದ್ದೇನೆ ಎಂದು ರಾಹುಲ್ ಸುದ್ದಿಗಾರರಿಗೆ ತಿಳಿಸಿರುವುದಾಗಿ ವರದಿಯಾಗಿದೆ.