ಭುವನೇಶ್ವರ, ಅ 04 (DaijiworldNews/DB): ಒಡಿಶಾದ ಜನಪ್ರಿಯ ಗಾಯಕ ಮುರಳಿ ಮೊಹಾಪಾತ್ರ (59) ಅವರು ವೇದಿಕೆಯಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಹಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಕೊರಾಪುಟ್ ಜಿಲ್ಲೆಯಲ್ಲಿ ದುರ್ಗಾ ಪೂಜಾ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಮುರಳಿ ಅವರು ಭಾನುವಾರ ರಾತ್ರಿ ಹಾಡುತ್ತಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಹಾಡುವಾಗ ಕುರ್ಚಿ ಮೇಲೆ ಕುಳಿತಿದ್ದರು. ಆದರೆ ಹಾಡುತ್ತಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು ಎಂದು ಮುರಳಿ ಸಹೋದರ ಬಿಭೂತಿ ಪ್ರಸಾದ್ ಮೊಹಾಪಾತ್ರ ತಿಳಿಸಿದ್ದಾರೆ.
ಜೇಪೋರ್ನ ಅಕ್ಷಯ ಮೊಹಾಂತಿ ಎಂದೂ ಪ್ರಸಿದ್ದರಾಗಿದ್ದ ಮುರಳಿ ಮೊಹಾಪಾತ್ರ, ಗಾಯನ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದು ಲಕ್ಷಾಂತರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಗಾಯಕರಾಗುವುದಕ್ಕೂ ಮುನ್ನ ಅವರು ಜೇಪೋರ್ ಸಬ್ ಕಲೆಕ್ಟರ್ ಕಚೇರಿಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ವರ್ಷಾರಂಭದಲ್ಲಿ ಪ್ರಸಿದ್ದ ಗಾಯಕ ಕೆ.ಕೆ. ಅವರೂ ಇದೇ ರೀತಿ ಹಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.