ಬೆಂಗಳೂರು, ಅ 03 (DaijiworldNews/SM): ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪಿಎಫ್ಐ ಕಾರ್ಯಕರ್ತರ ವಿರುದ್ಧ ಇದ್ದ ಪ್ರಕರಣಗಳನ್ನು ಕೈಬಿಡಲಾಗಿತ್ತು ಎಂದು ಆರ್ ಅಶೋಕ್ ಮಾಡಿರುವ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ತಮ್ಮ ಸರಕಾರದ ಅವಧಿಯಲ್ಲಿ ಪಿಎಫ್ಐ ಮೇಲಿನ ಪ್ರಕರಣಗಳನ್ನು ಹಿಂಪಡೆದಿಲ್ಲ. ಇದೆಲ್ಲಾ ಬಿಜೆಪಿಯ ಅಪಪ್ರಚಾರ ಎಂದು ಮಾಜಿ ಮುಖ್ಯಮಂತ್ರಿ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ. ಹಾಗೆಯೇ, ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳ ಜೊತೆ ಬಿಜೆಪಿ ಒಳ ಒಪ್ಪಂದ ನಡೆದಿದೆ ಎನ್ನುವ ಆರೋಪದ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ನ್ಯಾಯಾಂಗ ತನಿಖೆ ಅಗಬೇಕೆಂದು ಒತ್ತಾಯಿಸಿದ್ದಾರೆ.
"ಭಾರತ್ ಜೋಡೋ ಯಾತ್ರೆಯ ಯಶಸ್ಸು ಮತ್ತು ಇದಕ್ಕೆ ಸಿಗುತ್ತಿರುವ ಜನ ಮನ್ನಣೆಯ ಗಮನವನ್ನು ಮತ್ತೆ ಬೇರೆಡೆಗೆ ಸೆಳೆಯಲು ಬಿಜೆಪಿ ತನ್ನ ಸಾಂಪ್ರದಾಯಿಕವಾದ ಸನಾತನ ಸುಳ್ಳು ಪಾಂಡಿತ್ಯಕ್ಕೆ ಮೊರೆ ಹೋಗಿದೆ. ತಮಗೆ ವಹಿಸಿದ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಲಾಗದೆ ನಾಡಿನ ಜನರನ್ನು ಮಳೆ-ಪ್ರವಾಹದ ಪ್ರಪಾತದಲ್ಲಿ ಮುಳುಗಿಸಿದ ಸಚಿವ ಆರ್.ಅಶೋಕ್ ಅವರ ಬಾಯಲ್ಲಿ ಹಳೆ ಸುಳ್ಳನ್ನು ಹೊಸದಾಗಿ ಹೇಳಿಸಿದೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.