ಕಲಬುರಗಿ, ಅ 03 (DaijiworldNews/SM): ಕಾಂಗ್ರೆಸ್ ಪಿಎಫ್ಐ ಸಂಘಟನೆಯ ತಾಯಿ ಇದ್ದಂತೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಿಎಫ್ಐ ಮೇಲಿನ ಕೇಸ್ ರದ್ದು ಮಾಡಿ ಅವರು ಬೆಳೆಯಲು ಅನುವು ಮಾಡಿಕೊಟ್ಟಿದೆ. ಅದು ತಾಯಿ ಮಮಕಾರ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಪಾದಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಿಎಫ್ಐ ಬೆಳೆಸುವುದರ ಹಿಂದೆ ಮುಸ್ಲಿಂ ಮತಗಳ ಮೇಲಿನ ಮಮಕಾರವೂ ಇದೆ. ಒಂದೆಡೆ ಮುಸ್ಲಿಮರನ್ನು ಓಲೈಸುತ್ತಾ, ಇನ್ನೊಂದೆಡೆ ಒಬಿಸಿಗಳನ್ನು ಅಹಿಂದ ಹೆಸರಿನಲ್ಲಿ ಉಸಿರುಗಟ್ಟಿಸಿ ಸಾಯಿಸಲಾಗುತ್ತಿದೆ. ಇದು ಕಾಂಗ್ರೆಸ್ ದ್ವಿಮುಖ ನೀತಿ. ಇದು ಸರಿಯಾದುದ್ದಲ್ಲ ಎಂದರು.
ಕಾಂಗ್ರೆಸ್ ಸೇರಿದಂತೆ ಇತರೆ ಸಂಘಟನೆಗಳು ಆರೋಪ ಮಾಡುವಂತೆ ಆರ್ಎಸ್ಎಸ್ ಯಾವುದೇ ಶಸ್ತ್ರಾಸ್ತ್ರ ಹಾಗೂ ಬಾಂಬ್ ಸ್ಫೋಟದ ತರಬೇತಿ ನೀಡಿಲ್ಲ. ಪಿಎಫ್ಐ ಬಾಂಬ್ ಸ್ಫೋಟದ ತರಬೇತಿ ನೀಡಿರುವುದು ಎಲ್ಲರಿಗೂ ತಿಳಿದ ವಿಷಯ. ನಮಗೆ ದೇಶಪ್ರೇಮ ಬಿಟ್ಟು ಬೇರೇನೋ ಗೊತ್ತಿಲ್ಲ. ಪಿಎಫ್ಐಗೆ ರಾಷ್ಟ್ರದ್ರೋಹ ಬಿಟ್ಟು ಬೇರೇನೂ ಗೊತ್ತಿಲ್ಲ. ದೇಶದ್ರೋಹಿ ಚಟುವಟಿಕೆಗಳನ್ನು ಮಾಡ್ತಿರೋದು ಪಿಎಫ್ಐ ಬ್ಯಾನ್ ಆದಂತೆ, ಮುಂದಿನ ದಿನಗಳಲ್ಲಿ ಎಸ್ಡಿಪಿಐ ಕೂಡ ಬ್ಯಾನ್ ಆಗಲಿದೆ ಎಂದರು.
ಎಲ್ಲ ಹೆಣ್ಣನ್ನು ತಾಯಿ ಎಂದು ಕರೆಯೋಕ್ಕಾಗಲ್ಲ. ಕೋಟ್ಯಂತರ ಜನರ ತಾಯಿ ಆರ್ಎಸ್ಎಸ್. ಅವರಿಗೆಲ್ಲಾ ರಾಷ್ಟ್ರಪ್ರೇಮವನ್ನು ಕಲಿಸಿದೆ. ದೇಶ ಹೀಗೆ ಇರಬೇಕು ಎನ್ನುವ ಅಭಿಮಾನ ಹುಟ್ಟಿಸಿದೆ. ಅದೆಲ್ಲದಕ್ಕೂ ಮುಖ್ಯವಾಗಿ ಪ್ರತಿ ಪ್ರಜೆಯೊಳಗೆ ನನ್ನ ದೇಶ, ನಾನು ಹಿಂದೂ ಎನ್ನುವ ಉಮೇದು ಹುಟ್ಟಿಸಿದೆ. ಅದಕ್ಕಾಗಿ ಬ್ಯಾನ್ ಮಾಡಬೇಕಾ? ಇದೆಲ್ಲವೂ ತಲೆ ಸರಿ ಇಲ್ಲದ ಸಿದ್ದರಾಮಯ್ಯ ಲೆಕ್ಕಾಚಾರ. ನಾನ್ಯಾವಾಗ ಸಚಿವ ಸ್ಥಾನ ಕೊಡಿ ಅಂತಾ ಕೇಳಿದೀªನಿ, ಅದು ಪಕ್ಕದ ಹೈಕಮಾಂಡ್ಗೆ ಬಿಟ್ಟ ವಿಚಾರ. ಅದರಲ್ಲಿ ನಾನೂ ಏನೂ ಡಿಮ್ಯಾಂಡ್ ಮಾಡಿಲ್ಲ. ನನಗೆ ಕ್ಲೀನ್ಚಿಟ್ ಸಿಕ್ಕಿದೆ. ದೊಡ್ಡ ಆರೋಪದಿಂದ ನಾನು ಮುಕ್ತನಾಗಿದ್ದೇನೆ. ಬಳಿಕ ನನಗೆ ಯಡಿಯೂರಪ್ಪ, ಬೊಮ್ಮಾಯಿ, ಕಟೀಲ್ ಕಾಲ್ ಮಾಡಿ ಅಭಿನಂದಿಸಿದರು. ಅಷ್ಟು ಸಾಕು ಎಂದರು.