ಕೊಪ್ಪಳ, ಅ 03 (DaijiworldNews/DB): ಬೆತ್ತಲೆಯಾಗಿ ನಿಂತು ಪೂಜೆ ಮಾಡಿದರೆ ತಂದೆಯ ಸಾಲ ತೀರುವುದರೊಂದಿಗೆ ಕೈ ತುಂಬಾ ಹಣ ಸಿಗುತ್ತದೆ ಎಂದು ನಂಬಿಸಿ ಬಾಲಕನನ್ನು ವಿವಸ್ತ್ರಗೊಳಿಸಿ ಪೂಜೆ ಮಾಡಿ ವೀಡಿಯೋ ವೈರಲ್ ಮಾಡಿದ ಅಮಾನವೀಯ ಘಟನೆ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ನಡೆದಿದೆ.
16 ವರ್ಷದ ಬಾಲಕನನ್ನು ಗ್ರಾಮದ ಕೆಲವರು ವಿವಸ್ತ್ರಗೊಳಿಸಿ ಪೂಜೆ ಮಾಡಿದ್ದಾರೆ. ತಂದೆಯ ಸಾಲ ತೀರಬೇಕೆಂದರೆ ಬೆತ್ತಲೆ ಪೂಜೆ ಮಾಡಬೇಕು. ಅಲ್ಲದೆ ಸಾಕಷ್ಟು ಹಣವೂ ಕೈ ಸೇರುತ್ತದೆ ಎಂದು ಬಡತನ ಹಿನ್ನೆಲೆ ಹೊಂದಿರುವ ಮನೆಯ ಬಾಲಕನನ್ನು ನಂಬಿಸಲಾಗಿದೆ. ಕಿಡಿಗೇಡಿಗಳ ಮಾತನನ್ನು ನಂಬಿದ ಬಾಲಕ ಅದಕ್ಕೆ ಒಪ್ಪಿಕೊಂಡಿದ್ದಾನೆ. ಅದರಂತೆ ಹುಬ್ಬಳ್ಳಿಯ ರೂಂವೊಂದರಲ್ಲಿ ಬಾಲಕನನ್ನು ಕರೆದೊಯ್ದು ಬೆತ್ತಲೆ ಪೂಜೆ ಮಾಡಲು ಹೇಳಿ ಅದನ್ನು ವೀಡಿಯೋ ಮಾಡಿಕೊಂಡಿದ್ದಾರೆ. ಬಳಿಕ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನೊಂದ ಬಾಲಕ ಮತ್ತು ಆತನ ಮನೆಯವರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಿಡಿಗೇಡಿಗಳಾದ ಶರಣಪ್ಪ, ವಿರುಪನಗೌಡ, ಶರಣಪ್ಪ ತಳವರ್ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.
ಕೊಪ್ಪಳದಲ್ಲಿ ಬಾಲಕನ ತಂದೆ ಸಾಲ ಮಾಡಿ ಮನೆ ಕಟ್ಟಿಸಿದ್ದು, ಸಾಲ ತೀರಿಸುವುದಕ್ಕಾಗಿ ಬಾಲಕ ಹುಬ್ಬಳ್ಳಿಗೆ ತೆರಳಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಕಷ್ಟವನ್ನು ಆತ ತನ್ನ ಪರಿಚಯಸ್ಥರಿಗೆ ಹೇಳಿಕೊಂಡಿದ್ದು, ಇದನ್ನೇ ಅವಕಾಶವಾಗಿ ಕಿಡಿಗೇಡಿಗಳು ಬಳಸಿಕೊಂಡು ಬಾಲಕನನ್ನು ಬೆತ್ತಲೆಯಾಗಿ ಪೂಜೆ ಮಾಡಿಸಿದ್ದಾರೆ.
ಜಲಜೀವನ್ ಯೋಜನೆ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಅದರಲ್ಲಿ ಕೆಲಸ ಮಾಡಲು ಮಗನನ್ನು ಕಳುಹಿಸಿಕೊಡಿ ಎಂದು ಜೂನ್ 6ರಂದು ಮೂವರು ಮನೆಗೆ ಬಂದು ಕೇಳಿದ್ದ ಹಿನ್ನೆಲೆಯಲ್ಲಿ ನಾನು ಮಗನನ್ನು ಕಳುಹಿಸಿಕೊಟ್ಟಿದ್ದೆ. ಕೆಲಸದ ಸಂದರ್ಭದಲ್ಲಿ ಮಗ ಆರ್ಥಿಕ ಸಮಸ್ಯೆಯನ್ನು ಹೇಳಿಕೊಂಡಿದ್ದು, ಇದನ್ನೇ ಕೃತ್ಯಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಬೆತ್ತಲೆ ಮಾಡಿ ಮೈಗೆ ವಿಭೂತಿ ಹಚ್ಚಿ, ಕೊರಳಿಗೆ ಹೂವಿನ ಹಾರ ಹಾಕಿದ್ದಾರೆ. ನಿಂಬೆ ಹಣ್ಣಿನ ದೃಷ್ಟಿ ತೆಗೆದು ಅದನ್ನು ಕತ್ತರಿಸಿ ಮಗನ ತಲೆಯ ಮೇಲೆ ಹಿಂಡಿದ್ದಲ್ಲದೆ, ಆತನ ಮರ್ಮಾಂಗ ಮುಟ್ಟಿ ಅಸಹ್ಯವಾಗಿ ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ. ವಿಷಯ ಬಾಯ್ಬಿಟ್ಟರೆ ನಿನ್ನನ್ನು ಹಾಗೂ ತಂದೆಯನ್ನು ಹತ್ಯೆ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಐಟಿ ಕಾಯ್ದೆ, ಬಾಲ ನ್ಯಾಯ (ಮಕ್ಕಳ ಹಕ್ಕುಗಳ ಪೋಷಣೆ) ಕಾಯ್ದೆಯಡಿ ದೂರು ದಾಖಲಾಗಿದ್ದು, ಪೊಲೀಸರು ಎರಡು ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.