ನವದೆಹಲಿ, ಅ 03 (DaijiworldNews/DB): ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾದಂತಹ ದೈತ್ಯ ಐಟಿ ಕಂಪೆನಿಗಳಲ್ಲಿ ಕೆಲಸ ಲಭಿಸಿತ್ತೆಂದು ಖುಷಿಯಲ್ಲಿದ್ದ ಫ್ರೆಶರ್ಗಳಿಗೆ ಈಗ ಬಹುದೊಡ್ಡ ಆಘಾತ ಎದುರಾಗಿದೆ. ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡು ಆಫರ್ ಲೆಟರ್ನ್ನೂ ನೀಡಿದ್ದ ಈ ಕಂಪೆನಿಗಳು ಪ್ರಸ್ತುತ ಉದ್ಯೋಗವನ್ನೇ ರದ್ದುಮಾಡಿವೆ!
ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಕ್ಯಾಂಪಸ್ ಸೆಲೆಕ್ಷನ್ ಮೂಲಕ ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರ ಸೇರಿದಂತೆ ವಿವಿಧ ದೈತ್ಯ ಐಟಿ ಕಂಪೆನಿಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದವು. ಅಲ್ಲದೆ ಆಫರ್ ಲೆಟರ್ಗಳನ್ನು ಸಹ ನೀಡಿದ್ದವು. ಆದರೆ ಇದೀಗ ಅಂತಹ ಎಲ್ಲಾ ಆಯ್ಕೆಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ವತಃ ಕಂಪೆನಿಗಳೇ ಆಯ್ಕೆಯಾದ ಉದ್ಯೋಗಾರ್ಥಿಗಳಿಗೆ ಮಾಹಿತಿ ನೀಡಿದ್ದು, ಇದರಿಂದ ಉದ್ಯೋಗದ ಖುಷಿಯಲ್ಲಿದ್ದ ಫ್ರೆಶರ್ಗಳಿಗೆ ಆಘಾತ ಉಂಟಾಗಿದೆ. ಹಲವರು ಏಳೆಂಟು ತಿಂಗಳ ಹಿಂದೆಯೇ ಆಫರ್ ಲೆಟರ್ನ್ನು ಪಡೆದುಕೊಂಡಿದ್ದರು.
ಈ ಕಂಪೆನಿಗಳಲ್ಲಿ ಉದ್ಯೋಗ ದೊರಕಿದ ಹಿನ್ನೆಲೆಯಲ್ಲಿ ಉದ್ಯೋಗಾರ್ಥಿಗಳು ಬೇರೆ ಕಡೆ ಉದ್ಯೋಗವನ್ನೂ ಹುಡುಕಿಲ್ಲ. ಇದೀಗ ಏಕಾಏಕಿ ಉದ್ಯೋಗ ರದ್ದು ಮಾಡಿರುವುದರಿಂದ ಬೇರೆ ಉದ್ಯೋಗವೂ ಇಲ್ಲದೆ ಕಂಗಾಲಾಗಿದ್ದಾರೆ. ಉದ್ಯೋಗ ರದ್ದತಿ ಬಗ್ಗೆ ಎಲ್ಲರಿಗೂ ಇ-ಮೇಲ್ ಕಳುಹಿಸಲಾಗಿದ್ದು, ಅದರಲ್ಲಿ ನಿಮ್ಮ ಶೈಕ್ಷಣಿಕ ಅರ್ಹತೆ ನಮ್ಮ ನಿರೀಕ್ಷೆಯ ಮಟ್ಟದಲ್ಲಿಲ್ಲ ಎಂಬ ಕಾರಣ ನೀಡಲಾಗಿದೆ. ಆದರೆ ಸಂದರ್ಶನ ನಡೆಸಿ ಆಯ್ಕೆ ಮಾಡಿ ಆಫರ್ ಲೆಟರ್ ನೀಡುವ ಮೊದಲು ಶೈಕ್ಷಣಿಕ ಮಾಹಿತಿಯನ್ನು ಕಂಪೆನಿಯವರು ತಿಳಿದುಕೊಂಡಿಲ್ಲವೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಜಾಗತಿಕವಾಗಿ ಐಟಿ ವಲಯ ನಿಧಾನಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಅಲ್ಲದೆ, ವಿಶ್ವದಲ್ಲಿ ಆರ್ಥಿಕ ಕುಸಿತಕ್ಕೆ ಮತ್ತೊಮ್ಮೆ ಸಿಲುಕಬಹುದೆಂಬ ಆತಂಕದಿಂದ ಕಂಪೆನಿಗಳು ಈ ನಿರ್ಧಾರಕ್ಕೆ ಬಂದಿವೆ ಎನ್ನಲಾಗುತ್ತಿದೆ.