ಭದೋಹಿ, ಅ 03 (DaijiworldNews/DB): ದುರ್ಗಾಪೂಜೆ ಪೆಂಡಾಲ್ನಲ್ಲಿ ಬೆಂಕಿ ಹೊತ್ತಿಕೊಂಡು ಐವರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಉತ್ತರಪ್ರದೇಶದ ಭದೋಹಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಭದೋಹಿ ಡಿಎಂ ಗೌರಂಗ್ ರಾಠಿ ತಿಳಿಸಿರುವುದಾಗಿ ವರಿಯಾಗಿದೆ. ಸುಮಾರು 150 ಮಂದಿ ದುರ್ಗಾಪೂಜೆ ಆರತಿ ವೇಳೆ ಹಾಜರಿದ್ದರು. ಆರತಿ ನಡೆಯುತ್ತಿದ್ದ ವೇಳೆ ಪೆಂಡಾಲ್ನಲ್ಲಿ ಡಿಜಿಟಲ್ ಶೋ ಕೂಡಾ ನಡೆಯುತ್ತಿತ್ತು. ಇದೇ ವೇಳೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹತ್ತಿಕೊಂಡಿದೆ. ಜನ ಪ್ರಾಣ ರಕ್ಷಣೆಗಾಗಿ ಚೆಲ್ಲಾಪಿಲ್ಲಿಯಾಗಿ ಓಡಿದ್ದು, ಜನಜಂಗುಳಿಯನ್ನು ದಾಟಿಕೊಂಡು ಹೊರ ಬರುವಷ್ಟರಲ್ಲಿ ಐವರು ಸಜೀವದಹನಗೊಂಡರು ಎಂದು ತಿಳಿದು ಬಂದಿದೆ.
ಇಡೀ ಪೆಂಡಾಲ್ ಸುಟ್ಟು ಬೂದಿಯಾಗಿತ್ತು. ಮಾಹಿತಿ ತಿಳಿದ ತತ್ಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 33 ಮಂದಿಯನ್ನು ಬಿಎಚ್ಯು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 30 ಮಂದಿಗೆ ಶೇ. 30-40 ಸುಟ್ಟ ಗಾಯಗಳಾಗಿವೆ ಎಂದು ಭದೋಹಿ ಡಿಎಂ ಗೌರಂಗ್ ರಾಠಿ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.