ನವದೆಹಲಿ, ಅ 02 (DaijiworldNews/DB): ಕರ್ನಾಟಕ ಕಾಂಗ್ರೆಸ್ನಲ್ಲಿ ಯಾವುದೇ ಬಣ ಇಲ್ಲ. ಕಾಂಗ್ರೆಸ್ ಬಣ ಮಾತ್ರ ಇರುವುದು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಕಣದಲ್ಲಿರುವ ಅವರು ಈ ಸಂಬಂಧ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾತ ಮಾತನಾಡಿ, ಕಾಂಗ್ರೆಸ್ನಲ್ಲಿ ಯಾವುದೇ ಬಣ ಇಲ್ಲ. ಇದ್ದರೆ ಅದು ಕಾಂಗ್ರೆಸ್ ಬಣ ಮಾತ್ರ. ಬಣಗಳ ಬಗ್ಗೆ ಓಡಾಡುತ್ತಿರುವ ಸುದ್ದಿಗಳೆಲ್ಲ ಸತ್ಯಕ್ಕೆ ದೂರವಾಗಿದೆ ಎಂದರು.
ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿಯವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ನನ್ನನ್ನು ಸ್ಪರ್ಧೆಗೆ ಹಲವರು ಒತ್ತಾಯಿಸಿದರು. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸುತ್ತಿದ್ದೇನೆ ಎಂದ ಅವರು, ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.
ಡೀಸೆಲ್, ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುತ್ತಿದ್ದರೆ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಹೋರಾಟ ಮಾಡುವ ಕೆಲಸವನ್ನು ಹೃದಯದಿಂದ ಇಲ್ಲಿವರೆಗೆ ಮಾಡಿಕೊಂಡು ಬಂದಿದ್ದು, ಜನವಿರೋಧಿ ನೀತಿಗಳ ವಿರುದ್ದ ಸದಾ ಹೋರಾಡುತ್ತೇನೆ ಎಂದವರು ತಿಳಿಸಿದರು.