ಕೊಯಮತ್ತೂರು, ಅ 02 (DaijiworldNews/DB): ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಅಜ್ಜ, ಸ್ನೇಹಿತ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
15 ವರ್ಷದ ಬಾಲಕಿ ಕಳೆದ ಎರಡು ವರ್ಷಗಳಿಂದ ಉಡುಮಲ್ ಪೇಟೆ ಮೂಲದ 21 ವರ್ಷದ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಬಾಲಕಿಯ ಮನೆ ಸಮೀಪದಲ್ಲಿ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ. ಬಾಲಕಿ ಗರ್ಭಿಣಿಯಾದಾಗ ಆತಂಕಗೊಂಡ ಆಕೆ ತನ್ನ 52 ವರ್ಷದ ಅಜ್ಜನಲ್ಲಿ ವಿಷಯ ತಿಳಿಸಿದ್ದಾಳೆ. ಬಳಿಕ ಗರ್ಭಪಾತ ಮಾಡಿಸಲು ಅಜ್ಜ ನೆರವಾಗಿದ್ದು, ಆನಂತರ ಮೊಮ್ಮಗಳಿಗೆ ತಾನೇ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅಲ್ಲದೆ ವಿಷಯ ತಿಳಿಸಿದ್ದಲ್ಲಿ ಗರ್ಭಪಾತದ ಬಗ್ಗೆ ಪೋಷಕರಿಗೆ ಹೇಳುವುದಾಗಿ ಹೆದರಿಸಿದ್ದಾನೆ.
ಪದೇಪದೇ ಈ ರೀತಿಯಾದ್ದರಿಂದ ಸೆಪ್ಟೆಂಬರ್ 17ರಂದು ಬಾಲಕಿ ಮನೆಬಿಟ್ಟು ಉಡುಮಲ್ ಪೇಟೆಯಲ್ಲಿರುವ ಗೆಳೆಯನ ಮನೆಗೆ ಬಂದಿದ್ದಾಳೆ. ಈ ವೇಳೆ ಇಬ್ಬರ ಮದುವೆಗೆ ಆತನ ಕುಟುಂಬ ವ್ಯವಸ್ಥೆ ಮಾಡಿದೆ. ಇತ್ತ ಬಾಲಕಿ ನಾಪತ್ತೆಯಾಗಿರುವ ಕುರಿತು ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಆಕೆಯನ್ನು ಸೆಪ್ಟೆಂಬರ್ 23ರಂದು ಪೊಲೀಸ್ ಠಾಣೆಗೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಬಾಲಕಿಯನ್ನು ವಿಚಾರಿಸಿದಾಗ ಸ್ನೇಹಿತ ಮತ್ತು ಅಜ್ಜ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾಳೆ. ಆಕೆಯ ಹೇಳಿಕೆ ಆಧಾರದ ಮೇಲೆ ಯುವಕ, ಅಜ್ಜ, ಅವರಿಗೆ ಸಹಕರಿಸಿದ ವ್ಯಕ್ತಿಯ ಸ್ನೇಹಿತ ಮತ್ತು ಯುವಕನ ಚಿಕ್ಕಪ್ಪನ ವಿರುದ್ದ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಲಿಸಿ, ಶುಕ್ರವಾರ ಅಜ್ಜ ಸಹಿತ ಮೂವರನ್ನು ಮತ್ತು ಶನಿವಾರ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.