ಭೋಪಾಲ್, ಅ 02 (DaijiworldNews/DB): ಒಂದು ವರ್ಷದ ಬಾಲಕಿಯ ಶ್ವಾಸನಾಳೆದಲ್ಲಿ ಹೇರ್ ಪಿನ್ ಸಿಕ್ಕಿ ಹಾಕಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹೇರ್ಪಿನ್ನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದಿದ್ದಾರೆ.
ಮೂರು ದಿನಗಳಿಂದ ಉಸಿರಾಡುವಾಗ ಬೇರೆಯದೇ ರೀತಿಯಲ್ಲಿ ಬಾಲಕಿ ಸದ್ದು ಮಾಡುತ್ತಿದ್ದಳು. ಇದರಿಂದ ಆಕೆಯನ್ನು ಇಂದೋರ್ನ ಆಸ್ಪತ್ರೆಗೆ ಆಕೆಯ ಪಾಲಕರು ಕರೆದೊಯ್ದಿದ್ದು, ಅಲ್ಲಿಂದ ಭೋಪಾಲ್ನ ಏಮ್ಸ್ಗೆ ಕಳುಹಿಸಿಕೊಡಲಾಗಿತ್ತು. ಏಮ್ಸ್ನಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು ತುರ್ತು ವಿಭಾಗಕ್ಕೆ ದಾಖಲಿಸಿ ಎದೆಯನ್ನು ರೇಡಿಯೋಗ್ರಾಫ್ ಮತ್ತು ರೆಸಲ್ಯೂಶನ್ ಸಿಟಿ ಮಾಡಿಸಿದ್ದಾರೆ. ಈ ವೇಳೆ ಬಲ ಶ್ವಾಸಕೋಶದ ಕೆಳಭಾಗದಲ್ಲಿ ದೊಡ್ಡ ಹೇರ್ಪಿನ್ ಕಂಡು ಬಂದಿದೆ. ಕೂಡಲೇ ಕಾರ್ಯೋನ್ಮುಖರಾದ ಆರು ಮಂದಿ ವೈದ್ಯರ ತಂಡ ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಹೇರ್ಪಿನ್ನ್ನು ಹೊರ ತೆಗೆದಿದ್ದಾರೆ.
ಇಂತಹ ಸಂದರ್ಭಗಳಲ್ಲಿ ರಿಜಿಡ್ ಬ್ರಾಂಕೋಸ್ಕೋಪಿ ನಡೆಸಿ ನಾಜೂಕಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.