ಮಥುರಾ, ಅ 02 (DaijiworldNews/DB): ಹಠಾತ್ ಹೃದಯಾಘಾತವಾದ ವ್ಯಕ್ತಿಯೊಬ್ಬರಿಗೆ ಪತ್ನಿಯ ಸಮಯಪ್ರಜ್ಞೆಯಿಂದ ಜೀವದಾನ ಸಿಕ್ಕಿದ ಘಟನೆ ಉತ್ತರ ಪ್ರದೇಶದ ಮಥುರಾ ರೈಲ್ವೇ ನಿಲ್ದಾಣದಲ್ಲಿ ಶನಿವಾರ ನಡೆದಿದೆ.
70 ವರ್ಷದ ಕೇಶವನ್ ಎಂಬವರಿಗೆ ಮಥುರಾ ರೈಲ್ವೇ ಜಂಕ್ಷನ್ನಲ್ಲಿ ಹಠಾತ್ ಹೃದಯಾಘಾತವಾಗಿದೆ.ಕೂಡಲೇ ಎಚ್ಚೆತ್ತುಕೊಂಡ ಅವರ ಪತ್ನಿ ಪತಿ ಬಾಯಿಗೆ ಬಾಯಿಟ್ಟು ಉಸಿರು ತುಂಬಿ ಜೀವ ಉಳಿಸಿಕೊಂಡಿದ್ದಾರೆ.ಪತ್ನಿಯ ಸಮಯಪ್ರಜ್ಞೆ ಮತ್ತು ಬುದ್ದಿವಂತಿಕೆಯಿಂದಾಗಿ ಪತಿಯ ಜೀವ ಉಳಿದಿದ್ದು, ಬಳಿಕ ಜಂಕ್ಷನ್ನಲ್ಲಿದ್ದ ಆರ್ಪಿಎಫ್ ಸಿಬಂದಿ ಕೂಡಾ ಆಕೆಗೆ ಸಹಾಯ ಮಾಡಿದ್ದಾರೆ. ಆಕೆ ಬಾಯಿಗೆ ಬಾಯಿಟ್ಟು ಉಸಿರು ತುಂಬುತ್ತಿದ್ದಾಗ ಆರ್ಪಿಎಫ್ ಯೋಧರು ವ್ಯಕ್ತಿಯ ಕಾಲುಗಳಿಗೆ ಮಸಾಜ್ ಮಾಡಿದರು. ಇದರಿಂದ ವ್ಯಕ್ತಿ ಬದುಕುಳಿದಿದ್ದಾನೆ.
ಪತಿಗೆ ಹೃದಯಾಘಾತವಾದಾಗ ದೃತಿಗೆಡದೆ ಆತನನ್ನು ರಕ್ಷಿಸಲು ಮುಂದಾದ ಪತ್ನಿಯ ಕಾರ್ಯಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.