ಲಕ್ನೋ, ಅ 02 (DaijiworldNews/DB): ದೇವಸ್ಥಾನದಿಂದ ಹಿಂತಿರುಗುವಾಗ ಟ್ರ್ಯಾಕ್ಟರ್ ಟ್ರಾಲಿ ಹೊಂಡಕ್ಕೆ ಬಿದ್ದು ಸಂಭವಿಸಿದ ಅಪಘಾತದಲ್ಲಿ 26 ಮಂದಿ ಭಕ್ತಾದಿಗಳು ದುರ್ಮರಣಕ್ಕೀಡಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಘಟನೆಯಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಉನ್ನಾವೋದ ಚಂದ್ರಿಕಾ ದೇವಿ ದೇವಾಲಯಕ್ಕೆ ತೆರಳಿ ಶನಿವಾರ ರಾತ್ರಿ ವಾಪಸ್ಸಾಗುತ್ತಿದ್ದ ವೇಳೆ ಘಟಮ್ಪುರ್ ಬಳಿ ಸುಮಾರು 50 ಜನರಿದ್ದ ಟ್ರ್ಯಾಕ್ಟರ್ ಟ್ರಾಲಿ ಹೊಂಡಕ್ಕುರುಳಿದೆ. ಇಲ್ಲಿ ಕೆಸರುಮಿಶ್ರಿತ ನೀರಿದ್ದು, ಹಲವರು ಅದರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೃತರ ಪೈಕಿ ಹಲವರು ಕೊರ್ತಾ ಗ್ರಾಮದವರು ಎಂದು ಹೇಳಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ್ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡುವುದಾಗಿ ಟ್ವೀಟ್ ಮೂಲಕ ಘೋಷಿಸಿದ್ದಾರೆ. ಘಟನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವೂ ಸಹ ಅಪಘಾತದಲ್ಲಿ ಮೃತಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದೆ.
ಸಚಿವರಾದ ಅಜಿತ್ ಪಾಲ್ ಮತ್ತು ರಾಕೇಶ್ ಸಾಚನ್ ಅವರನ್ನು ಪರಿಹಾರ ಕಾರ್ಯಗಳ ಉಸ್ತುವಾರಿಗಾಗಿ ನಿಯೋಜಿಸಲಾಗಿದೆ. ಇದೇ ವೇಳೆ ಸಂಚಾರಕ್ಕೆ ಟ್ರಾಕ್ಟರ್ ಟ್ರಾಲಿಗಳನ್ನು ಬಳಸಬಾರದು, ಅದನ್ನು ಕೃಷಿ ಚಟುವಟಿಕೆಗಳಿಗೆ ಮಾತ್ರ ಮೀಸಲಿಡಬೇಕು ಎಂದು ಮುಖ್ಯಮಂತ್ರಿಗಳ ಕಚೇರಿ ಜನರಲ್ಲಿ ಮನವಿ ಮಾಡಿದೆ.
ಘಟನೆ ಮಾಹಿತಿ ತಿಳಿದು ಕೂಡಲೇ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪೊಲೀಸರೂ ಕೆಲಸದಲ್ಲಿ ಸಹಕರಿಸಿದರು. ಆಸ್ಪತ್ರೆಗಳ ಬಳಿ ಜನ ಜಮಾವಣೆಗೊಂಡ ಕಾರಣ ಭದ್ರತೆ ಕಲ್ಪಿಸಲಾಗಿದೆ ಎಂದು ಕಾನ್ಪುರದ ಎಸ್ಪಿ ತೇಜ್ ಸ್ವರೂಪ್ ಸಿಂಗ್ ಹೇಳಿದ್ದಾರೆ ಎಂದು ವರದಿಯಾಗಿದೆ.