ರಾಮನಗರ, ಅ 01 (DaijiworldNews/DB): ಚನ್ನಪಟ್ಟಣದ ರಾಂಪುರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಅಲ್ಲಿನ ಶಾಸಕ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿಲ್ಲ ಎಂದು ಆಕ್ರೋಶಗೊಂಡ ಜೆಡಿಎಸ್ ಬೆಂಬಲಿಗರು ಸಿ.ಪಿ. ಯೋಗೇಶ್ವರ್ ಕಾರಿಗೆ ಮೊಟ್ಟೆ ಎಸೆದು ಕಲ್ಲಿನಿಂದ ಹಾನಿಗೊಳಿಸಿದ ಘಟನೆ ಶನಿವಾರ ನಡೆದಿದೆ.
ಗುದ್ದಲಿಪೂಜೆ ನೆರವೇರಿಸಬೇಕಿದ್ದ ಜಿಲ್ಲಾ ಉಸ್ತುವಾರ ಸಚಿವ ಅಶ್ವಥ್ ನಾರಾಯಣ ಅವರು ಗೈರಾದ ಹಿನ್ನಲೆಯಲ್ಲಿ ಸಿ.ಪಿ. ಯೋಗೇಶ್ವರ್ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ 500ಕ್ಕೂ ಅಧಿಕ ಮಂದಿ ಜೆಡಿಎಸ್ ಬೆಂಬಲಿಗರು ಸ್ಥಳಕ್ಕಾಗಮಿಸಿ ಸಿಪಿವೈ ಕಾರಿಗೆ ಮುತ್ತಿಗೆ ಹಾಕಿ ಮೊಟ್ಟೆ ಎಸೆದಿದ್ದಾರೆ. ಅಲ್ಲದೆ ಕಲ್ಲು ಎಸೆದು ಹಾನಿಗೊಳಿಸಿದ್ದಾರೆ. ಅಲ್ಲದೆ ಸಿಪಿವೈ ಮತ್ತು ಅಶ್ವತ್ ನಾರಾಯಣ ಅವರಿಗೆ ದಿಕ್ಕಾರ ಕೂಗಿದ್ದಾರೆ. ಕೂಡಲೇ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಈ ವೇಳೆ ಕೆಲವು ಪೊಲೀಸರಿಗೂ ಕಲ್ಲೇಟು ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಜೆಡಿಎಸ್ನ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಘಟನೆ ಬಳಿಕ ಚನ್ನಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಪಿ. ಯೋಗೇಶ್ವರ್, ಇಂದಿನ ಘಟನೆ ನೋಡಿದಾಗ ಕುಮಾರಸ್ವಾಮಿಯವರು ಹತಾಶರಾದಂತೆ ಭಾಸವಾಗುತ್ತಿದೆ. ಅವರು ಅಭಿವೃದ್ದಿ ವಿಚಾರದಲ್ಲಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆ ಪಕ್ಷದ ಮುಖಂಡರು ಪಕ್ಷ ತ್ಯಜಿಸುತ್ತಿರುವುದರಿಂದಲೇ ಅವರಿಗೆ ಆಘಾತ ಉಂಟಾಗಿದೆ. ಅದನ್ನು ಮರೆ ಮಾಚಲು ಬೇರೆ ತಾಲೂಕುಗಳಿಂದ ಜೆಡಿಎಸ್ನ ಗೂಂಡಾಗಳನ್ನು ಕರೆಸಿ ದಾಂಧಲೆ ಎಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ನರಸಿಂಹಮೂರ್ತಿ ಎಂಬಾತ ನಾಲ್ಕೈದು ಗೂಂಡಾಗಳನ್ನು ಕರೆಸಿ ಕಲ್ಲು ಎಸೆಯಲು ಪ್ರೇರೇಪಿಸಿದ್ದಾನೆ. ಇದು ಕುಮಾರಸ್ವಾಮಿಯವರಿಗೆ ಶೋಭೆ ತರುವ ವಿಚಾರವಲ್ಲ. ರೈತರು ತಾಲೂಕಿನ ಸಮಸ್ಯೆಗಳನ್ನು ನನ್ನ ಬಳಿ ಹೇಳಿದ್ದರಿಂದ ಸಿಎಂ ಜೊತೆ ಚರ್ಚಿಸಿ ಇಲ್ಲಿನ ಅಭಿವೃದ್ದಿಗಾಗಿ ಅನುದಾನ ತಂದಿದ್ದೇನೆ. ಇದು ಕುಮಾರಸ್ವಾಮಿಯವರು ಹತಾಶರಾಗಲು ಕಾರಣವಾಗಿದೆ ಎಂದು ಇದೇ ವೇಳೆ ಟೀಕಿಸಿದರು.