ನವದೆಹಲಿ, ಅ 01 (DaijiworldNews/DB): ದೆಹಲಿಯಲ್ಲಿ ಇನ್ನು ಮುಂದೆ ಪೊಲ್ಯುಷನ್ ಅಂಡರ್ ಕಂಟ್ರೋಲ್(ಪಿಯುಸಿ) ಪ್ರಮಾಣಪತ್ರ ಇದ್ದರಷ್ಟೇ ಪೆಟ್ರೋಲ್ ಪಂಪ್ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸಿಗಲಿದೆ. ಹೀಗೊಂದು ವಿನೂತನ ಕ್ರಮಕ್ಕೆ ದೆಹಲಿ ಸರ್ಕಾರ ಮುಂದಾಗಿದೆ.
ವಾಹನಗಳಿಂದ ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಪಿಯುಸಿ ( ಪೊಲ್ಯುಷನ್ ಅಂಡರ್ ಕಂಟ್ರೋಲ್) ಪ್ರಮಾಣಪತ್ರ ಇದ್ದರಷ್ಟೇ ಪೆಟ್ರೋಲ್, ಡೀಸೆಲ್ ನೀಡುವ ನಿರ್ಧಾರಕ್ಕೆ ಬಂದಿದ್ದು, ಅಕ್ಟೋಬರ್ 25ರಿಂದಲೇ ಇದು ಜಾರಿಗೆ ಬರಲಿದೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಶನಿವಾರ ಹೇಳಿದ್ದಾರೆ.
ಪೊಲ್ಯುಷನ್ ಅಂಡರ್ ಕಂಟ್ರೋಲ್ (ಪಿಯುಸಿ) ಅಂದರೆ ವಾಹನದ 'ಮಾಲಿನ್ಯ ನಿಯಂತ್ರಣದಲ್ಲಿದೆ' ಎಂಬ ಪ್ರಮಾಣಪತ್ರವಾಗಿದೆ. ಶೀಘ್ರ ಈ ಸಂಬಂಧ ಅಧಿಸೂಚನೆ ಹೊರ ಬೀಳಲಿದೆ ಎಂದವರು ವಿವರಿಸಿದರು.
ಸೆಪ್ಟೆಂಬರ್ 29ರಂದು ನಡೆದ ಪರಿಸರ, ಸಾರಿಗೆ ಮತ್ತು ಸಂಚಾರ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಿಯಮದ ಅನುಷ್ಠಾನ ಮತ್ತು ಕಾರ್ಯವಿಧಾನಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದವರು ತಿಳಿಸಿದರು.
ದೆಹಲಿಯಲ್ಲಿ ಮಾಲಿನ್ಯ ಬಿಗಡಾಯಿಸುತ್ತಿದ್ದು, ವಾಹನಗಳ ಹೊಗೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದನ್ನು ಕಡಿಮೆ ಮಾಡುವುದು ಅತ್ಯಗತ್ಯವಾಗಿದ್ದು, ಪಿಯುಸಿ ಪ್ರಮಾಣಪತ್ರವನ್ನು ಕಡ್ಡಾಯ ಮಾಡಲಾಗಿದೆ ಎಂದರು.