ಜೈಪುರ, ಅ 01 (DaijiworldNews/DB): ರಾಜಸ್ಥಾನ ಸರ್ಕಾರವನ್ನು ಬೀಳಿಸುವ ಪ್ರಯತ್ನದಲ್ಲಿ ಬಿಜೆಪಿಗರು ಯಶಸ್ವಿಯಾಗಲು ಎಂದಿಗೂ ಬಿಡುವುದಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಐದನೇ ಬಜೆಟ್ ಅನ್ನು ಮಂಡಿಸುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದು ನಿಶ್ಚಿತ. ಯುವಕರು ಹಾಗೂ ವಿದ್ಯಾರ್ಥಿಗಳಿಗಾಗಿಯೇ ಮುಂದಿನ ಬಜೆಟ್ನ್ನು ಮೀಸಲಿಡಲಾಗುವುದು. ಯಾವುದೇ ಕಾರಣಕ್ಕೂ ಸರ್ಕಾರ ಬೀಳಿಸಲು ಬಿಜೆಪಿಯವರಿಗೆ ಅವಕಾಶ ನೀಡುವುದಿಲ್ಲ ಎಂದರು.
ನಮ್ಮ ಸರ್ಕಾರ ಬೀಳಿಸಲು ಬಿಜೆಪಿಯವರ ಪ್ರಯತ್ನ ಮುಂದುವರಿದಿದೆ. ಕುದುರೆ ವ್ಯಾಪಾರಕ್ಕೆ ಅವರು ಈ ಹಿಂದೆಯೂ ಯತ್ನಿಸಿದ್ದರು. ಆದರೆ ನಮ್ಮ ಶಾಸಕರು ಅವರ ಅಂತಹ ಪ್ರಯತ್ನಗಳಿಗೆ ಸೊಪ್ಪು ಹಾಕುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದು, ನಮ್ಮ ಸರ್ಕಾರಕ್ಕೆ ಇನ್ನಷ್ಟು ಬಲ ಬರಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ನೇರವಾಗಿ ನಿಮ್ಮ ಸಲಹೆಗಳನ್ನು ನನಗೆ ಕಳುಹಿಸಿಕೊಡಬಹುದು. ಹೀಗೆ ಸಲಹೆ ನೀಡುವುದರಿಂದ ಮುಂದೆ ಉತ್ತಮ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಬಹುದು ಎಂದವರು ಇದೇ ವೇಳೆ ಮನವಿ ಮಾಡಿದರು.