ದೆಹಲಿ, ಅ 01 (DaijiworldNews/DB): ಸೋದರ ಸಂಬಂಧಿ ಸೇರಿದಂತೆ ಮೂವರು ಲೈಂಗಿಕ ದೌರ್ಜನ್ಯ ಎಸಗಿ ಖಾಸಗಿ ಅಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ನೀಡಿದ್ದರಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 10 ವರ್ಷದ ಬಾಲಕ ಇಂದು ಮೃತಪಟ್ಟಿದ್ದಾನೆ.
ದೆಹಲಿಯ ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಖಾಸಗಿ ಅಂಗಕ್ಕೆ ರಾಡ್ ಹಾಕಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾನೆ. 2012 ಡಿಸೆಂಬರ್ 16ರಂದು ನಡೆದಿದ್ದ ಸಾಮೂಹಿಕ ಅತ್ಯಾಚಾರವನ್ನು ನೆನಪಿಸುವಷ್ಟು ಭೀಕರವಾಗಿ ಬಾಲಕನ ಸ್ಥಿತಿಯಿತ್ತು ಎಂದು ವೈದ್ಯರು ಹೇಳಿರುವುದಾಗಿ ವರದಿಯಾಗಿದೆ.
ಸೆಪ್ಟೆಂಬರ್ 18ರಂದು ಬಾಲಕನ ಸೋದರ ಸಂಬಂಧಿ ಸೇರಿದಂತೆ 10 ರಿಂದ 12 ವರ್ಷ ವಯಸ್ಸಿನ ಮೂವರು ಸ್ನೇಹಿತರು ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ್ದರು. ಬಾಲಕ ಇದಕ್ಕೆ ಆಕ್ಷೇಪಿಸಿದ್ದಕ್ಕೆ ಆತನ ಖಾಸಗಿ ಅಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ನೀಡಿದ್ದರು. ಘಟನೆ ನಡೆದು ನಾಲ್ಕು ದಿನಗಳ ಬಳಿಕ ಬಾಲಕನ ಸ್ಥಿತಿ ವಿಷಮಿಸಿದ ಕಾರಣ ಘಟನೆ ಬೆಳಕಿಗೆ ಬಂದಿದ್ದು, ಆತನ ಪೋಷಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಬಾಲಕನ ತಾಯಿ ಘಟನೆ ಸಂಬಂಧ ದೆಹಲಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಳು. ಮಗನನ್ನು ಆತನ ಮೂವರು ಸ್ನೇಹಿತರು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅಸ್ವಾಭವಿಕ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ವಿರೋಧಿಸಿದಕ್ಕೆ ದೊಣ್ಣೆ ಮತ್ತು ಇಟ್ಟಿಗೆಗಳಿಂದ ಹೊಡೆದು, ಆತನ ಖಾಸಗಿ ಅಂಗಕ್ಕೆ ರಾಡ್ ಹಾಕಿ ಚಿತ್ರ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಅದರಂತೆ ದೆಹಲಿ ಮಹಿಳಾ ಆಯೋಗ ಪೊಲೀಸರಿಗೆ ನೊಟೀಸ್ ಜಾರಿ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.