ಪಾಟ್ನಾ, ಅ 01 (DaijiworldNews/DB): ಉತ್ತರ ಪ್ರದೇಶದ ಅಪ್ರಾಪ್ತ ಬಾಲಕಿ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿ ಆಕೆಯನ್ನು ಮಹಿಳಾ ಪಿಂಪ್ಗೆ 50 ಸಾವಿರ ರೂ.ಗಳಿಗೆ ಮಾರಾಟ ಮಾಡಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧಿಸಿ ಮಹಿಳೆ ಸೇರಿ ಐವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಉತ್ತರ ಪ್ರದೇಶದ ಮೌ ಜಿಲ್ಲೆಯ ಸೋನಿ ದೇವಿ, ಮಧುಬನಿ ಜಿಲ್ಲೆಯ ಜೈನಗರದಲ್ಲಿರುವ ಅಶೋಕ್ ಮಾರ್ಕೆಟ್ನ ನೈಟ್ ಗಾರ್ಡ್ ಸೋನಿ ದೇವಿ, ಅರ್ಜುನ್ ಯಾದವ್ ಮತ್ತು ಎಲೆಕ್ಟ್ರಿಷಿಯನ್ ಸಜನ್ ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸ್ ಚಾಲಕ ಆಚಾರ್ಯ ಮತ್ತು ಜೈನಗರ ಪೊಲೀಸ್ ಠಾಣೆಯ ಚೋಕಿದಾರ್ ರಾಮಜೀವನ್ ಪಾಸ್ವಾನ್ ತಲೆಮರೆಸಿಕೊಂಡಿದ್ದಾರೆ. ಪೊಲೀಸ್ ಸಿಬಂದಿ ಸಹಿತ ಹಲವರು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಬಳಿಕ ಆಕೆಯನ್ನು ಮಹಿಳಾ ಪಿಂಪ್ಗೆ ಮಾರಾಟ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಮಹಿಳಾ ಪಿಂಪ್ನ್ನು ಗುರುವಾರ ರಾತ್ರಿ ಬಂಧಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ತಿಂಗಳ ಹಿಂದೆ ತನ್ನ ಮನೆ ತೊರೆದು ಬಿಹಾರದ ಮಧುಬನಿ ಜಿಲ್ಲೆಯ ಜೈನಗರ ಪಟ್ಟಣ ತಲುಪಿದ್ದಳು. ಅಲ್ಲಿನ ಅಶೋಕ್ ಮಾರ್ಕೆಟ್ನಲ್ಲಿ ತಿರುಗಾಡುತ್ತಿದ್ದ ಆಕೆ ಅರ್ಜುನ್ ಯಾದವ್ನ ಸಹಾಯ ಕೇಳಿದಾಗ ಆತ ಆಕೆಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಬಳಿಕ ತನ್ನ ಮೂವರು ಸ್ನೇಹಿತರನ್ನು ಬರ ಮಾಡಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದರು. ಬಳಿಕ ಅನೇಕ ಬಾರಿ ಇದೇ ರೀತಿ ಮಾಡಿದ್ದು, ಇತರರನ್ನು ಕೂಡಾ ಅತ್ಯಾಚಾರ ನಡೆಸಲು ಕರೆ ತಂದಿದ್ದಾರೆ. ಇತ್ತ ಬಾಲಕಿ ನಾಪತ್ತೆ ಕುರಿತು ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡು ಪೊಲೀಸರು ಮಧುಬನಿಯ ಜೈನಗರದ ಸೋನಿ ದೇವಿ ಮನೆಯಲ್ಲಿ ಬಾಲಕಿಯನ್ನು ಪತ್ತೆ ಹಚ್ಚಿದರು. ಆಕೆಯನ್ನು ರಕ್ಷಿಸಿದ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದರು.