ಅಹಮದಾಬಾದ್, ಸೆ 30 (DaijiworldNews/DB): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರನ್ನು ಮನೆಗೆ ಊಟಕ್ಕೆ ಆಹ್ವಾನಿಸಿದ್ದ ಆಟೋ ಚಾಲಕ ವಿಕ್ರಾಂತ್ ದಂತಾನಿ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಂತೆ!
ತಾನು ಮೋದಿ ಅಭಿಮಾನಿ ಎಂಬುದನ್ನು ಸ್ವತಃ ವಿಕ್ರಾಂತ್ ದಂತಾನಿಯವರೇ ಶುಕ್ರವಾರ ಹೇಳಿಕೊಂಡಿದ್ದಾರೆ. ಅಹಮದಾಬಾದ್ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಕೇಸರಿ ಶಾಲು, ಟೋಪಿ ಧರಿಸಿ ಕಾಣಿಸಿಕೊಂಡಿದ್ದ ವಿಕ್ರಾಂತ್ ಮಾಧ್ಯಮದವರೊಂದಿಗೆ ಮಾತನಾಡಿ, ತಾನು ಯುವಕನಾಗಿದ್ದಾಗಿನಿಂದಲೂ ನರೇಂದ್ರ ಮೋದಿಯವರ ಅಭಿಮಾನಿ. ಮತ ಹಾಕಲು ಆರಂಭಿಸಿದಾಗಿನಂದಲೇ ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಗಳಿಗೆ ಮತ ನೀಡಿಲ್ಲ. ಮುಂದೆಯೂ ಬಿಜೆಪಿಗೇ ಮತ ಹಾಕುವುದಾಗಿ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದೊಂದಿಗೆ ನನಗೆ ಯಾವುದೇ ಸಂಬಂಧ ಇಲ್ಲ ಎನ್ನುವ ಮೂಲಕ ಕೇಜ್ರೀವಾಲ್ ಅವರನ್ನು ಇಷ್ಟಪಡುವುದಾಗಿ ನೀಡಿದ್ದ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಆಟೋ ರಿಕ್ಷಾ ಒಕ್ಕೂಟ ಹೇಳಿದ್ದರಿಂದ ಕೇಜ್ರೀವಾಲ್ ಅವರನ್ನು ಮನೆಗೆ ಊಟಕ್ಕೆ ಕರೆದಿದ್ದೆ ಹೊರತು ನಾನಾಗಿ ಇಷ್ಟಪಟ್ಟು ಕರೆದದ್ದಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ದಂತಾನಿ ಮನೆಗೆ ಊಟಕ್ಕೆ ಆಹ್ವಾನಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಭದ್ರತಾ ಶಿಷ್ಟಾಚಾರವನ್ನು ಬದಿಗೊತ್ತಿ ಸೆಪ್ಟೆಂಬರ್ 12ರಂದು ಆತನ ಮನೆಗೆ ತೆರಳಿ ಕೇಜ್ರೀವಾಲ್ ಊಟ ಮಾಡಿದ್ದರು.