ನವದೆಹಲಿ, ಸೆ 30 (DaijiworldNews/DB): ರಾಹುಲ್ ಗಾಂಧಿ ನಡೆಸುತ್ತಿರುವ ಯಾತ್ರ ಭಾರತ್ ಜೋಡೋ ಅಲ್ಲ, ಬದಲಾಗಿ ಭಾರತ್ ತೋಡೋ ಆಗಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಆರೆಸ್ಸೆಸ್ ಸಿದ್ದಾಂತದ ವಿರುದ್ಧ ನಮ್ಮ ಹೋರಾಟ ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಟ್ವೀಟ್ ಮೂಲಕ ತಿರುಗೇಟು ನೀಡಿದ ಅವರು, ನೆಹರೂರವರೇ ಆರೆಸ್ಸೆಸ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದನ್ನು ರಾಹುಲ್ ಗಾಂಧಿಯವರು ಮೊದಲು ತಿಳಿದುಕೊಳ್ಳಲಿ ಎಂದಿದ್ದಾರೆ.
ಆರೆಸ್ಸೆಸ್ ಬಗ್ಗೆ ನೆಹರೂ ಹೊಗಳಿರುವಾಗ ರಾಹುಲ್ ಗಾಂಧಿ ಅದನ್ನು ತೆಗಳಿದರೆ ಸ್ವತಃ ನೆಹರೂರವರನ್ನೇ ರಾಹುಲ್ ತೆಗಳಿದಂತಲ್ಲವೇ? ಈ ದ್ವಿಮುಖ ನೀತಿ ಯಾಕೆ ಎಂದು ಪ್ರಶ್ನಿಸಿದ ಅವರು, ಭಾರತ್ ತೋಡೋ ಯಾತ್ರಾ ಎಂದು ಹ್ಯಾಶ್ಟ್ಯಾಗ್ ಬಳಸಿದ್ದಾರೆ.
ದೇಶ ರಕ್ಷಣೆ ಮತ್ತು ಏಕತೆ ವಿಷಯ ಬಂದಾಗ ಸದಾ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ಸಂಘಟನೆಯೆಂದರೆ ಅದು ಆರೆಸ್ಸೆಸ್. ಅಂತಹ ಸಂಘಟನೆ ಬಗ್ಗೆ ಅನಗತ್ಯ ಹೇಳಿಕೆ ನೀಡುವುದು ಸರಿಯಲ್ಲ ಎಂದವರು ಸಲಹೆ ಮಾಡಿದ್ದಾರೆ.